ನೂರಾರು ರೋಗಿಗಳ ರಕ್ಷಕ ಕೋವಿಡ್ ಮಿತ್ರ ಜೊತೆ ಟೆಲಿ ಆರೈಕೆ ಸೇರ್ಪಡೆ

ಮೈಸೂರು: ಕೋವಿಡ್ ಸೋಂಕಿತರನ್ನು ಆರಂಭದಲ್ಲೇ ಗುರುತಿಸಿ, ಜೀವ ಉಳಿಸುವ ಧ್ಯೇಯದೊಂದಿಗೆ ಆರಂಭವಾದ ಕೋವಿಡ್ ಮಿತ್ರ ಕೇಂದ್ರಗಳು ಈಗಾಗಲೇ ನೂರಾರು ರೋಗಿಗಳಿಗೆ ಆರೋಗ್ಯ ರಕ್ಷಣೆ ಮಾಡಿವೆ. ಇದರ ಜೊತೆಗೆ ಈಗ ಟೆಲಿ ಆರೈಕೆ ಸೇವೆಯೂ ಸೇರ್ಪಡೆಯಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.
ಕೋವಿಡ್ ಶಂಕಿತರು ಅಥವಾ ಸೋಂಕಿತರು ಮೊದಲು ಕೋವಿಡ್ ಮಿತ್ರಗೆ ಬರುತ್ತಾರೆ. ಇಲ್ಲಿ ವೈದ್ಯರು ತಪಾಸಣೆ ಮಾಡಿ, ರೋಗಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿರಲು (ಹೊಂ ಐಸೋಲೇಷನ್) ಅಥವಾ ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ಶಿಫಾರಸ್ಸು ಮಾಡುತ್ತಾರೆ. ಇದೇ ಮಾದರಿಯಲ್ಲಿ ಹೊಸದಾಗಿ ಟೆಲಿ ಆರೈಕೆ ಸೇವೆಯನ್ನು ಸಹ ಆರಂಭಿಸಲಾಗಿದ್ದು, ಬುಧವಾರ ಚಾಲನೆ ನೀಡಲಾಗಿದೆ.
ಟೆಲಿ ಆರೈಕೆ ಕೇಂದ್ರವನ್ನು ರೋಟರಿ ಮೈಸೂರು ಆವರಣದಲ್ಲಿ ಸ್ಥಾಪಿಸಲಾಗಿದೆ. 40ಕ್ಕೂ ಹೆಚ್ಚು ಸ್ವಯಂಸೇವಕ ವೈದ್ಯರು ಇದ್ದಾರೆ. ಈ ಟೆಲಿ ಆರೈಕೆ ಕೇಂದ್ರಕ್ಕೆ ಶಂಕಿತರು ಅಥವಾ ಸೋಂಕಿತರು ಕರೆ ಮಾಡಿ, ವಿವರ ನೀಡಿದರೆ ಸ್ವಯಂ ಸೇವಕ ವೈದ್ಯರು ರೋಗಿಗಳೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ಮಾಡುವರು ಎಂದವರು ತಿಳಿಸಿದ್ದಾರೆ.
ದೂರವಾಣಿ ಮೂಲಕ ಸಮಾಲೋಚನೆ ನಡೆಸುವ ವೈದ್ಯರು ಸಮಸ್ಯೆಯ ತೀವ್ರತೆಯ ಮೇಲೆ ಶಿಫಾರಸ್ಸು ಮಾಡುತ್ತಾರೆ. ವ್ಯಕ್ತಿ ಮನೆಯಲ್ಲೇ ಪ್ರತ್ಯೇಕವಾಗಿರಬೇಕೆ, ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ತೆರಳಬೇಕೆ ಅಥವಾ ವ್ಯಕ್ತಿಯನ್ನು ಖುದ್ದು ದೈಹಿಕವಾಗಿ ಪರೀಕ್ಷಿಸಬೇಕೆ ಎಂಬುದನ್ನು ವೈದ್ಯರು ದೂರವಾಣಿಯಲ್ಲಿ ತಿಳಿಸುತ್ತಾರೆ. ಮನೆಯಲ್ಲೇ ಪ್ರತ್ಯೇಕವಾಗಿರಬೇಕು ಎನ್ನುವುದಾದರೆ ವ್ಯಕ್ತಿಗೆ ಮೆಡಿಷನ್ ಕಿಟ್ ಅನ್ನು ಮನೆಗೆ ನೀಡಲಾಗುತ್ತದೆ. ದೈಹಿಕವಾಗಿ ಪರೀಕ್ಷಿಸಬೇಕು ಎನ್ನುವುದಾದರೆ ಕೋವಿಡ್ ಮಿತ್ರ ಕೇಂದ್ರಗಳಿಗೆ ಬರಲು ತಿಳಿಸುತ್ತಾರೆ.
ಮೈಸೂರಿನಲ್ಲಿ ಆರಂಭಿಸಲಾಗಿರುವ ಕೋವಿಡ್ ಮಿತ್ರ ಕೇಂದ್ರಗಳಲ್ಲಿ ನೆನ್ನೆವರೆಗೆ 75 ಸೋಂಕಿತರನ್ನು ಟ್ರಯೇಜ್ ಮಾಡಲಾಗಿದೆ. ಈ ಪೈಕಿ 24 ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 51 ಸೋಂಕಿತರನ್ನು ಮನೆಯಲ್ಲೇ ಪ್ರತ್ಯೇಕವಾಗಿರಲು (ಹೋಂ ಐಸೋಲೇಷನ್)ಗೆ ಕಳುಹಿಸಿಕೊಡಲಾಗಿದೆ. ಮನೆಯಲ್ಲೇ ಪ್ರತ್ಯೇಕವಾಗಿರುವ ಸೋಂಕಿತರಿಗೆ ಮೆಡಿಷನ್ ಕಿಟ್ ನೀಡಲಾಗುತ್ತಿದೆ. ಇದೇರೀತಿ ಗ್ರಾಮೀಣ ಭಾಗದ ಕೋವಿಡ್ ಮಿತ್ರ ಕೇಂದ್ರಗಳಲ್ಲೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಂಚಕರ್ಮ ಆಯುರ್ವೇದಿಕ್ ಆಸ್ಪತ್ರೆ, ಬೀಡಿ ಕಾರ್ಮಿಕರ ಆಸ್ಪತ್ರೆ, ತುಳಸಿದಾಸ್ ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಕೋವಿಡ್ ಮಿತ್ರಗಳಿಂದ ಉತ್ತಮ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಮೈಸೂರು ನಗರದ ವ್ಯಾಪ್ತಿಯಲ್ಲಿರುವ ಎಲ್ಲಾ 21ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಮಿತ್ರ ಕೇಂದ್ರಗಳಾಗಿಪರಿವರ್ತಿಸಲಾಗಿದ್ದು, ಗುರುವಾರದಿಂದ ಕಾರ್ಯಾರಂಭ ಮಾಡಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ತೆರೆಯಲಾಗಿರುವ ಮೈಸೂರಿನ 3 ಕೋವಿಡ್ ಮಿತ್ರ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ 150 ಕೋವಿಡ್ ಮಿತ್ರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬುಧವಾರ ವಿವಿಧ ಕೋವಿಡ್ ಮಿತ್ರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶಿಲೀಸಿ, ಈ ಕೋವಿಡ್ ಮಿತ್ರ ಕೇಂದ್ರಗಳಿಗೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದರು.
ಹಂಚ್ಯಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಿದ್ದಾರ್ಥನಗರ ಹಾಗೂ ಚಾಮುಂಡಿಪುರಂನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತೆರೆದಿರುವ ಕೋವಿಡ್ ಮಿತ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಹಂಚ್ಯಾ ಗ್ರಾಮದ ಕೋವಿಡ್‍ಮಿತ್ರ ಕೇಂದ್ರದಲ್ಲಿ ಸೋಂಕಿತರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೆಡಿಸಿನ್ ಕಿಟ್ ಗಳನ್ನು ವಿತರಿಸಿದರು. ಜಿಲ್ಲೆಯ ಎಲ್ಲಾ ಕೋವಿಡ್‍ಮಿತ್ರ ಕೇಂದ್ರಗಳಲ್ಲೂ ಇದೇ ರೀತಿ ಮೆಡಿಸಿನ್ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ತಾಲ್ಲೂಕು ತಹಶೀಲ್ದಾರ್ ರಕ್ಷಿತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ರಮೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮಹದೇವಪ್ರಸಾದ್, ಡಾ.ರವೀಂದ್ರ, ಡಾ. ಟಿ.ಆರ್. ನವೀನ್, ಮತ್ತಿತರು ಉಪಸ್ಥಿತರಿದ್ದರು.