2ನೇ ಡೋಸ್ ಗಾಗಿ ಮಾತ್ರ ಲಸಿಕೆ ಬಳಕೆ -ರೋಹಿಣಿ ಸಿಂಧೂರಿ

ಮೈಸೂರು: ಲಭ್ಯವಿರುವ ಎಲ್ಲಾ ಲಸಿಕೆಗಳನ್ನು ಪೂರ್ಣವಾಗಿ 2ನೇ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು.
ವೀಡಿಯೋ ಸಂವಾದದಲ್ಲಿ ಗುರುವಾರ ಎಲ್ಲಾ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಇ.ಒ.ಗಳ ಸಭೆ ನಡೆಸಿ ಜಿಲ್ಲಾಧಿಕಾರಿಗಳು ಈ ಸೂಚನೆ ನೀಡಿದರು.
ರಾಜ್ಯದಲ್ಲಿ ಮೊದಲ ಡೋಸ್ ಪಡೆದಿರುವ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ನೀಡಬೇಕಾಗಿದೆ. 2ನೇ ಡೋಸ್ ಪಡೆಯದಿದ್ದರೆ ಪ್ರಯೋಜನ ಆಗುವುದಿಲ್ಲ ಎಂದು ಅವರು ಹೇಳಿದರು.
ಹಳ್ಳಿಗಳಿಗೆ ಬೆಂಗಳೂರು ಮತ್ತು ಹೊರಗಿನಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಇವರನ್ನು ಓಡಾಡಲು ಬಿಟ್ಟರೆ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಡಿಸಿ ಹೇಳಿದರು.
ಆಕ್ಸಜಿನ್ ಲಭ್ಯತೆ ಬಗ್ಗೆ ಎಲ್ಲಾ ತಾಲ್ಲೂಕುಗಳಲ್ಲಿ ಆಡಿಟ್ ಆಗಬೇಕು. ಆಕ್ಸಿಜನ್ ಈಗ ಅತ್ಯಮೂಲ್ಯವಾಗಿದೆ. ಪ್ರತಿದಿನ ಎಷ್ಟು ಪೂರೈಕೆಯಾಗಿದೆ, ಎಷ್ಟು ಬಳಕೆಯಾಗಿದೆ, ಬಾಕಿ ಎಷ್ಟು ಉಳಿದಿದೆ ಎಂಬ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡುವಂತೆ ತಿಳಿಸಿದರು.
ಮೈಕ್ರೋ ಫೈನಾನ್ಸ್ ಕಂಪನಿಯವರು ವಸೂಲಿಗಾಗಿ ಮನೆ ಮನೆಗಳಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಲಾಕ್‍ಡೌನ್ ಅವಧಿಯಲ್ಲಿ ಯಾರೂ ವಸೂಲಿಗೆ ಬಾರದಂತೆ ಸೂಚನೆ ನೀಡಲು ತಹಶೀಲ್ದಾರರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ಎ.ಎಂ.ಯೋಗೀಶ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.