ಕೊರೊನಾ ಗೆದ್ದು ಬಂದ ಮೈಸೂರು ಜಿಲ್ಲಾಸ್ಪತ್ರೆಯ ವೈದ್ಯೆ ಡಾ. ತ್ರಿವೇಣಿ ಅವರ ಆರೋಗ್ಯ ವಿಚಾರಿಸಿದ ಸಿ.ಎಂ. ಬಿಎಸ್ ವೈ

ಮೈಸೂರು: ಕೋವಿಡ್ ಹಿನ್ನೆಲೆಯಲ್ಲಿ ಸದಾ ಒತ್ತಡದಲ್ಲಿ ಕೆಲಸ ಮಾಡುವ ನೀವುಗಳು ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೈಸೂರಿನ ಜಿಲ್ಲಾ ಆಸ್ಪತ್ರೆಯಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ತ್ರಿವೇಣಿ ಅವರಿಗೆ ತಿಳಿಸಿದರು.
ಮೈಸೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡುವ ಡಾ. ಕೆ. ತ್ರಿವೇಣಿ ಹಾಗೂ ಅವರ ಮಗಳು ಸ್ವತಃ ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆದು ಪ್ರಸ್ತುತ ಸೇವೆ ಮುಂದುವರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ ಆಗಿರುವ ಡಾ. ತ್ರಿವೇಣಿ ಹಾಗೂ ಅವರಂತೆ ವಿವಿಧ ಜಿಲ್ಲೆಯ ಹಲವು ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅವರು ವೀಡಿಯೋ ಸಂವಾದ ನಡೆಸಿದರು.
ನಿಮಗೂ ಹಾಗೂ ನಿಮ್ಮ ಮಗಳಿಗೂ ಕೋವಿಡ್ ಬಂದಿದ್ದಾಗಿ ತಿಳಿದುಬಂದಿದೆ. ಹೀಗಾಗಿ ಜನರ ಜೀವ ಉಳಿಸಲು ಮೊದಲ ಆದ್ಯತೆ ನೀಡಿರುವ ನೀವುಗಳು ನಿಮ್ಮ ಆರೋಗ್ಯದಷ್ಟೇ ನಿಮ್ಮ ಕುಟುಂಬದ ಆರೋಗ್ಯದ ಮೇಲೂ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.
ಕೋವಿಡ್ ಸಮಯದಲ್ಲಿ ಬಹಳ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯವಾದದ್ದು ಎಂದು ಹೇಳಿದರು.
ಬಳಿಕ ಮಾತನಾಡಿದ ಡಾ. ತ್ರಿವೇಣಿ ಅವರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.