ಮೈಸೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವುದರ ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ ಎಂದರು.
ಕೋವಿಡ್-19 ಅನ್ನು ತಡೆಗಟ್ಟುವ ಸಲುವಾಗಿ ಎಲ್ಲಾ ಬಗೆಯ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ, ಅಂಗನವಾಡಿ ಕಾರ್ಯಕರ್ತರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ, ಸೋಂಕಿನ ಲಕ್ಷಣಗಳು ಕಂಡುಬಂದವರನ್ನು ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯಲ್ಲಿರುವ ಹಾಸಿಗೆಗಳಿಗೆ ಅನುಗುಣವಾಗಿ ಸಾಕಾಗುವಷ್ಟು ಆಕ್ಸಿಜನ್ ಒದಗಿಸಲಾಗಿದೆ. ಹೊಸದಾಗಿ ಆಕ್ಸಿಜನ್‍ನೆಟೆಡ್ ಹಾಸಿಗೆ ವ್ಯವಸ್ಥೆ ಮಾಡಿದಾಗ ಅವಶ್ಯಕತೆಗೆ ತಕ್ಕಂತೆ ಪೂರೈಸಲಾಗುವುದು. ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ಬಗೆಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲಾಕ್‍ಡೌನ್ ಕ್ರಮದಿಂದಾಗ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡುಬಂದಿದೆ. ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಸರ್ವಪ್ರಯತ್ನ ಮಾಡುವಂತೆ ಸಲಹೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಆರಂಭಿಸಿರುವ ಕೋವಿಡ್ ಮಿತ್ರ ಯಶಸ್ಸು ಕಂಡಿದ್ದು, ರಾಜ್ಯಕ್ಕೆ ವಿಸ್ತರಿಸುವ ಆಲೋಚನೆ ಮಾಡಿದ್ದೀರ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ಸರ್ಕಾರದ ಮಾರ್ಗಸೂಚಿ ಪಾಲಿಸುವುದರ ಜೊತೆಗೆ ವಿವಿಧ ಜಿಲ್ಲೆಗಳು ಅವರದ್ದೆ ಆದಂತಹ ಕೆಲವು ವಿಶೇಷ ಪ್ರಯತ್ನ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಬ್ಲಾಕ್ ಫಂಗಸ್‍ಗೆ ಚಿಕಿತ್ಸೆ ನೀಡಲು ಸರ್ಕಾರ ಗುರುತಿಸಿರುವ ಆರು ಕೇಂದ್ರದಲ್ಲಿ ಮೈಸೂರು ವೈದ್ಯಕೀಯ ಕಾಲೇಜನ್ನು ಆಯ್ಕೆ ಮಾಡಲಾಗಿದೆ. ತ್ವರಿತವಾಗಿ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಒದಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.