ಸುತ್ತೂರು ಮಠದಿಂದ ಮಕ್ಕಳಿಗೆ ಉಚಿತ ಶಿಕ್ಷಣ

ಮೈಸೂರು, ಮೇ 23- ಕೊರೊನಾ ತೊಂದರೆಯಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬದವರ ಮಕ್ಕಳಿಗೆ ಶ್ರೀ ಸುತ್ತೂರು ಮಠದ ವತಿಯಿಂದ ಉಚಿತ ಶಿಕ್ಷಣ ನೀಡಲಾಗುವುದೆಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ಅನೇಕ ಕುಟುಂಬಗಳವರು ಸಾವು-ನೋವಿನಿಂದ ದುಃಖಿತರಾಗಿದ್ದಾರೆ. ಕುಟುಂಬದ ಸದಸ್ಯರು ಜೀವನ ನಿರ್ವಹಣೆಗೆ ಕಷ್ಟಪಡುವ ಸಂದರ್ಭ ಬಂದೊದಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆಯೂ ಅವರಿಗೆ ಸವಾಲಾಗಿರುತ್ತದೆ. ಸಂಕಷ್ಟದಲ್ಲಿರುವ ಕುಟುಂಬದ ಮಕ್ಕಳಿಗೆ ಸುತ್ತೂರು ಶ್ರೀಕ್ಷೇತ್ರದ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಕಲ್ಪಿಸಲಾಗುವುದೆಂದು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
1 ರಿಂದ 10ನೇ ತರಗತಿವರೆಗೆ ಮಕ್ಕಳನ್ನು ಶಾಲೆಗೆ ದಾಖಲಿಸಬಹುದಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸ ಬಯಸುವ ಪೋಷಕರು ಹಾಗೂ ಕುಟುಂಬದ ಸದಸ್ಯರು 7411486938 ದೂರವಾಣಿಯಲ್ಲಿ ಸಂಪರ್ಕಿಸಿ ವಿವರ ಪಡೆದು ನೋಂದಾಯಿಸಿಕೊಳ್ಳಲು ಶ್ರೀಗಳು ಕೋರಿದ್ದಾರೆ.