ಚಾಮರಾಜನಗರ: ಕೋವಿಡ್-19 ನಿಯಮ ಮತ್ತು ಮಾರ್ಗಸೂಚಿಗಳನ್ನು ಪಾಲಿಸದ ಹಾಗೂ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ಬಂದವರ ಐ.ಎಲ್.ಐ, ಸಾರಿ ಪ್ರಕರಣಗಳ ಪರಿಶೀಲನೆ ನಡೆಸಿ ಕೋವಿಡ್ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡದ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಎರಡು ನರ್ಸಿಂಗ್ ಹೋಂ ವೈದ್ಯರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಹನೂರು ತಾಲೂಕಿನ ಭಾರತಿ ನರ್ಸಿಂಗ್ ಹೋಂ ವೈದ್ಯರಾದ ಡಾ. ಪ್ರಕಾಶ್ ಹಾಗೂ ಸ್ನೇಹ ನರ್ಸಿಂಗ್ ಹೋಂ ನ ಡಾ. ಮಂಜುನಾಥ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಕಳೆದ ಮೇ 21ರಂದು ಜಿಲ್ಲಾ ಉಸ್ತುವಾರಿ ಸಚಿವರು ಹನೂರು ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತಿ ನರ್ಸಿಂಗ್ ಹೋಂ ಮತ್ತು ಸ್ನೇಹ ನರ್ಸಿಂಗ್ ಹೋಂ ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕೋವಿಡ್-19 ನಿಯಮ ಮತ್ತು ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸದೇ ಇರುವುದು ಕಂಡುಬಂದಿತ್ತು. ಅಲ್ಲದೇ ನರ್ಸಿಂಗ್ ಹೋಂ ನಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಬಳಸದೇ ಇರುವ ಬಗ್ಗೆ ಗಮನಿಸಲಾಗಿತ್ತು. ಈಗಾಗಲೇ ರ್ಯಾಟ್ ಮತ್ತು ವಿ.ಟಿ.ಎಂ. ಕಿಟ್ ಗಳನ್ನು ತಾಲೂಕು ಆರೋಗ್ಯಾಧಿಕಾರಿಗಳಿಂದ ಪಡೆದು ಗಂಟಲು ದ್ರವ ಸಂಗ್ರಹಿಸುವ ಬಗ್ಗೆ ತಿಳಿಸಲಾಗಿತ್ತು. ಅಲ್ಲದೇ ನರ್ಸಿಂಗ್ ಹೋಂ ಗೆ ಚಿಕಿತ್ಸೆಗೆ ಬರುವವರಲ್ಲಿ ಐ.ಎಲ್.ಐ, ಸಾರಿ ಪ್ರಕರಣಗಳ ಸೂಕ್ತ ಪರಿಶೀಲನೆ ನಡೆಸಿ ಹತ್ತಿರದ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡುವ ಬಗ್ಗೆ ತಿಳಿಸಿದ್ದರೂ ಈ ಯಾವುದೇ ಪ್ರಕ್ರಿಯೆಗಳನ್ನು ನಿರ್ವಹಿಸದೇ ಇರುವುದರಿಂದ ನಿಮ್ಮಿಂದ ಚಿಕಿತ್ಸೆ ಪಡೆದು ವಿಳಂಬವಾಗಿ ಸರ್ಕಾರಿ ಆಸ್ಪತ್ರೆ, ಸಂಸ್ಥೆಗಳಿಗೆ ದಾಖಲಾಗುತ್ತಿದ್ದು, ಸೋಂಕು ಪ್ರಮಾಣ ಹೆಚ್ಚಾಗಿ ಹರಡಲು ಹಾಗೂ ಮರಣ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಈ ಸಂಬಂಧ ನಿಮ್ಮ ಸಂಸ್ಥೆಯ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ ಸೂಕ್ತ ಸಮಜಾಯಿಷಿಯನ್ನು ನೀಡಬೇಕು. ತಪ್ಪಿದಲ್ಲಿ ನಿಮ್ಮ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ನೋಟಿಸಿನಲ್ಲಿ ತಿಳಿಸಿದ್ದಾರೆ.