ಸಕಾಲದಲ್ಲಿ ದೊರೆತ ಚಿಕಿತ್ಸೆಯಿಂದ ಗುಣಮುಖರಾದ ಅರಣ್ಯವಾಸಿಗಳು

ಚಾಮರಾಜನಗರ: ಗ್ರಾಮ ಪಂಚಾಯಿತಿ ವಹಿಸಿದ ಕಾಳಜಿ ಹಾಗೂ ವಿಶೇಷ ಪರಿಶ್ರಮದ ಫಲವಾಗಿ ಕಾಡಂಚಿನ ಗ್ರಾಮಗಳು ಕೋವಿಡ್ ಮುಕ್ತವಾಗುತ್ತಿವೆ.

ರಾಜ್ಯದಲ್ಲಿ ಪ್ರಥಮ ಬಾರಿಗೆ ಪಿ.ಜಿ. ಪಾಳ್ಯ ಗ್ರಾಮ ಪಂಚಾಯಿತಿ ವತಿಯಿಂದ ಆದಿವಾಸಿ ಬುಡಕಟ್ಟು ಜನಾಂಗದವರಿಗಾಗಿ ಜೀರಿಗೆ ಗದ್ದೆ ಗ್ರಾಮದ ಗಿರಿಜನ ಆಶ್ರಮ ಶಾಲೆಯಲ್ಲಿ ಪ್ರತ್ಯೇಕ ಕೋವಿಡ್ ಸೆಂಟರ್ ಆರಂಭಿಸಲಾಯಿತು.

ಪಿ.ಜಿ. ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೀರಿಗೆ ಗದ್ದೆ, ಹಾವಿನ ಮೂಲೆ, ಬೆಳ್ಳಾವೆಯ ಗ್ರಾಮಗಳಲ್ಲಿ ಕೆಲವರಿಗೆ ಕೋವಿಡ್ ಸೋಂಕು ಧೃಡಪಟ್ಟಿದ್ದವು. ಕೂಡಲೇ ವಿಚಾರ ತಿಳಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣ್ ರಾವ್ ಅವರು ಹಾಡಿಗಳಿಗೆ ತೆರಳಿ ಜೀರಿಗೆ ಗದ್ದೆಯಲ್ಲಿಯೇ ಕೋವಿಡ್ ಕೇರ್ ಸೆಂಟರ್ ಅನ್ನು ಪ್ರಾರಂಭಿಸಲು ನಿರ್ದೇಶನ ನೀಡಿದರು. ಇದರಿಂದ ಸೋಂಕಿಗೆ ಒಳಗಾಗಿದ್ದ ಗಿರಿಜನರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಆರೈಕೆ ಲಭಿಸುವಂತಾಯಿತು.

ಕೋವಿಡ್ ಕೇರ್ ಸೆಂಟರ್ ಸೌಲಭ್ಯ ಕಲ್ಪಿಸಿ ಸಕಾಲದಲ್ಲಿ ಕಾಡಂಚಿನ ಜನರಿಗೆ ಚಿಕಿತ್ಸೆ ದೊರೆತ ಪರಿಣಾಮ ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿಗೆ ಬರುವ ಹಾಡಿಗಳು ಕೋವಿಡ್ನಿಂದ ಮುಕ್ತಗೊಂಡಿವೆ. ಇದಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣ ರಾವ್ ಅವರಿಗೆ ಆದಿವಾಸಿ ಬುಡಕಟ್ಟು ಜನಾಂಗದವರು ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ಥಳೀಯರು ಆದಿವಾಸಿಗಳು ಲಸಿಕೆ ಪಡೆಯಲು ಆರಂಭದಲ್ಲಿ ಹಿಂಜರಿಕೆ ತೋರುತ್ತಿದ್ದರು. ಹಾಡಿಗಳಿಗೆ ತೆರಳಿದ ಜಿಲ್ಲಾ ಪಂಚಾಯತ್ ಸಿ.ಇ.ಒ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಪಡೆಯನ್ನು ಸಕ್ರಿಯಗೊಳಿಸಿ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಹೀಗಾಗಿ ಬಿಳಿಗಿರಿರಂಗನ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಸೋಲಿಗರು ಲಸಿಕೆ ಹಾಕಿಸಿಕೊಳ್ಳುವತ್ತ ಆಸಕ್ತಿ ತೋರಿದರು.

ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀರಿಗೆಗದ್ದೆ ಗ್ರಾಮದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಗಿರಿಜನರಿಗೆ ಗ್ರಾಮ ಪಂಚಾಯಿತಿ ವತಿಯಿಂದ ತೆರೆಯಲಾಗಿದ್ದ ಕೋವಿಡ್ ಕೇರ್ ಸೆಂಟರ್ನಲ್ಲಿ 31 ಸೋಂಕಿತರು ದಾಖಲಾಗಿದ್ದರು. ಈ ಎಲ್ಲರೂ ಗುಣಮುಖರಾಗಿದ್ದಾರೆ.

ವಿಶೇಷವಾಗಿ 60 ಜನ ವಿಕಲಚೇತನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಹಲವರು ಇಂದು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿದ್ದಾರೆ.