ಮೈಸೂರು ವಿವಿ ಪದವಿ ಪರೀಕ್ಷೆ ಅಕ್ರಮ: ಪ್ರಮುಖ ಆರೋಪಿ ಬಂಧನ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಬದಲಿಸುವ ವ್ಯವಸ್ಥಿತ ಜಾಲದ ಪ್ರಮುಖ ಆರೋಪಿಯನ್ನು ಮೈಸೂರು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಿವಿ ಸಿಬ್ಬಂದಿ ಮಹಾರಾಣಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಮದ್ ನಿಸಾರ್ ಬಂಧಿತ ಪ್ರಮುಖ ಆರೋಪಿ.

ಸಿಸಿಬಿ ಎಸಿಪಿ ಅಶ್ವತ್ಥ ನಾರಾಯಣ ನೇತೃತ್ವದ ತಂಡ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಏ. 21ರಂದು ಬೆಂಗಳೂರು-ನೀಲಗಿರಿ ರಸ್ತೆಯ ಬ್ಲ್ಯೂ ಡೈಮಂಡ್ ವಸತಿ ಗೃಹದಲ್ಲಿ ಕೆಲವು ವಿದ್ಯಾರ್ಥಿಗಳು ಹಾಗೂ ವಿವಿಯ ಸಿಬ್ಬಂದಿ ಏ. 17ರಂದು ನಡೆದಿದ್ದ ಬಿಎಸ್ ಸಿಯ ರಸಾಯನ ಶಾಸ್ತ್ರ ಉತ್ತರ ಪತ್ರಿಕೆಗಳನ್ನು ಸಿದ್ಧಪಡಿಸುತ್ತಿದ್ದರು. ಅಸಲಿ ಉತ್ತರ ಪತ್ರಿಕೆಯ ಜಾಗದಲ್ಲಿ ಈ ಉತ್ತರ ಪತ್ರಿಕೆ ಇಡುವ ಸಂಚು ಇವರದಾಗಿತ್ತು.

ಈ ವೇಳೆ ದಾಳಿ ನಡೆಸಿದ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ವಹಿಸಿ ಆರೋಪಿಗಳನ್ನು ಬಿಟ್ಟು ಕಳುಹಿಸಿದರು ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಸಂಘಟನೆಯ ಜಂಟಿ ಕಾರ್ಯದರ್ಶಿ ಕೆ.ಎಸ್.ಸೋಮಸುಂದರ್ ದೂರು ನೀಡಿದ್ದರು.

ದೂರನ್ನು ನಗರ ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿ ಮಹಮದ್ ನಿಸಾರ್, ರಾಕೇಶ್, ಚಂದನ್, ಚೇತನ್ ಹಾಗೂ ಮಂಡಿ ಠಾಣೆಯ ಇನ್ಸಪೆಕ್ಟರ್ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿದ್ದರು.

ಮಂಡಿ ಠಾಣೆಯ ಇನ್ಸಪೆಕ್ಟರ್ ನಾರಾಯಣಸ್ವಾಮಿ ಸೇರಿದಂತೆ ಐವರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.

ಈ ಪ್ರಕರಣ ಸಂಬಂಧ ಮೂರು ಮಂದಿಯನ್ನು ಈಗಾಗಲೇ ಬಂಧಿಸಲಾಗಿತ್ತು.