ಹೃದಯಘಾತದಿಂದ ಪೊಲೀಸ್ ಪೇದೆ ಸಾವು

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಶಾಗ್ಯ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ತನಿಖೆಗೆ ತೆರಳಿದ್ದ ಪೊಲೀಸ್ ಪೇದೆಯೋರ್ವ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ನಿವಾಸಿಯಾಗಿರುವ ಬಾಬು (38) ಎಂಬುವವರೇ ಮೃತ ದುರ್ದೈವಿ.

ಮೃತ ಬಾಬು ಅವರು ಆಂತರಿಕ ಭದ್ರತಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಾವೇರಿ ವನ್ಯಜೀವಿ ವಲಯದ ಹೂಕುಂದ ಸಮೀಪದ ಕೌಗಲ್ ವಾಚಿಂಗ್ ಟವರ್ ಸಮೀಪ ಕಳೆದ 4-5 ದಿನಗಳ ಹಿಂದೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ಮಾಹಿತಿ ಪಡೆದ ಚಾಮರಾಜನಗರ ಜಿಲ್ಲಾ ಪೊಲೀಸರು ತನಿಖೆಗಾಗಿ ಆಂತರಿಕ ಭದ್ರತಾ ವಿಭಾಗದ ಇನ್ಸಪೆಕ್ಟರ್ ಚನ್ನನಾಯಕ್ ಮತ್ತು ಸಿಬ್ಬಂದಿಗಳ ತಂಡವನ್ನು ಅರಣ್ಯ ಪ್ರದೇಶಕ್ಕೆ ಕಳುಹಿಸಿದ್ದರು.

ಈ ವೇಳೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಈ ತಂಡದಲ್ಲಿದ್ದ ಪೇದೆ ಬಾಬು ದಿಢೀರ್ ಕುಸಿದುಬಿದ್ದಿದ್ದಾರೆ. ಕೂಡಲೇ ಬಾಬು ಅವರನ್ನು ಸಮೀಪದ ಬಂಡಳ್ಳಿ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯುವಾಗ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ.