ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ವಾಹನ ಸಾಲ ಪಡೆಯುತ್ತಿದ್ದ 15 ಮಂದಿ ಕಳ್ಳರನ್ನು ಮೈಸೂರು ನಗರ ಪೊಲೀಸರು ನಡೆಸಿ ಬಂಧಿಸಿದ್ದಾರೆ.
ಚೋಳಮಂಡಲಂ ಫೈನಾನ್ಸ್ಗೆ ವಂಚನೆ ಮಾಡಿದ್ದ 15 ಮಂದಿಯನ್ನ ಮೈಸೂರು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದು, ಉಳಿದವಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳಿಂದ 7 ಲಾರಿ, 2 ಕಾರು, 1 ಬೈಕ್, 2 ಲ್ಯಾಪ್ಟಾಪ್ ಅನೇಕ ದಾಖಲೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
10 ಲಾರಿಗಳಿಗೆ ಒಟ್ಟು 1,35,53,000 ರೂ ಸಾರಿಗೆ ವಾಹನ ಸಾಲ ಪಡೆದಿದ್ದ ಖದೀಮರು ಹಲವು ತಿಂಗಳು ಸಾಲದ ಮಾಸಿಕ ಕಂತು ಕಟ್ಟಿದ್ದರು.
ನಂತರ ಸಾಲದ ಮಾಸಿಕ ಕಂತು ಕಟ್ಟುವುದನ್ನ ಆರೋಪಿಗಳು ನಿಲ್ಲಿಸಿದ್ದಾರೆ. ಈ ವೇಳೆ ಲಾರಿ ವಶಕ್ಕೆ ಪಡೆಯಲು ಫೈನಾನ್ಸ್ ಕಂಪನಿ ಮುಂದಾಗಿದ್ದು, ಈ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.
ಆರೋಪಿಗಳು ಲಾರಿಗಳ ಇಂಜಿನ್ ಚಾರ್ಸಿ ನಂಬರ್ ಪಂಚಿಂಗ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದರು.
ಈ ಬಗ್ಗೆ ಚೋಳಮಂಡಲಂ ಫೈನಾನ್ಸ್ ಮ್ಯಾನೇಜರ್ ವಿಜಯ್ ಮೈಸೂರಿನ ದೇವರಾಜ ಪೊಲೀಸರಿಗೆ ದೂರು ನೀಡಿದ್ದರು.
ದೇವರಾಜ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗಿ, ಆರೋಪಿಗಳು ಲಾರಿ ಇಲ್ಲದೆಯೇ ಆಂಧ್ರಪ್ರದೇಶದ ವಿವಿಧ ಆರ್ ಟಿ ಒ ಕಚೇರಿಯಲ್ಲಿ ಆರ್ಸಿ, ವರ್ಗಾವಣೆ ದಾಖಲಾತಿ ಸೃಷ್ಟಿಸಿ ಮರು ನೊಂದಣಿಗೆ ಸಲ್ಲಿಕೆ ಮಾಡಿದ್ದರು. ಇದಕ್ಕೆ ಸ್ಥಳೀಯ ನಕಲಿ ವಿಳಾಸದ ದಾಖಲೆ ಸಲ್ಲಿಕೆ ಮಾಡಿದ್ದರು ಎಂಬುದು ಗೊತ್ತಾಗಿದೆ.
ಲಾರಿ ಪರಿಶೀಲನೆಗೆ ಹಾಜರುಪಡಿಸದೆ ಖದೀಮರು ಆರ್ಸಿ ಪಡೆಯುತ್ತಿದ್ದರು. ಬರೋಬ್ಬರಿ 200 ಆರ್ಸಿ ಕಾರ್ಡ್ ಮಾಡಿಸಿರುವ ಬಗ್ಗೆ ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರೀತಿ ಹಲವು ಫೈನಾನ್ಸ್ ಕಂಪನಿಗಳಿಗೆ ನಕಲಿ ದಾಖಲೆ ನೀಡಿ ಆರೋಪಿಗಳು ಮೋಸ ಮಾಡಿದ್ದು ಈ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.