ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಮೀನಿಗೆ ಹೋಗುವ ದಾರಿ ವಿಚಾರದಲ್ಲಿ ಗಲಾಟೆಯಾಗಿ ಮಚ್ಚಿನಿಂದ ಹೊಡೆದರ ಪರಿಣಾಮ ಸ್ಥಳದಲ್ಲೆ ಓರ್ವ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಕೊತ್ತಲವಾಡಿ ಗ್ರಾಮದ ಗುರುಸ್ವಾಮಿ (65) ಕೊಲೆಯಾದವರು. ಇವರ ಪುತ್ರ ಮಂಜುನಾಥ್‌ಗೆ (29) ತೀವ್ರ ಸ್ವರೂಪದ ಹಲ್ಲೆಯಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಜಿಪಂ ಉಪಾಧ್ಯಕ್ಷೆ ಶಶಿಕಲಾ ಸೋಮಲಿಂಗಪ್ಪ ಅವರ ತಂದೆ ಎಂದು ತಿಳಿದುಬಂದಿದೆ. ಆರೋಪಿಗಳಾದ ಮಲೆಮಾದಪ್ಪ, ಪತ್ನಿ ಮಂಗಳಮ್ಮ ಮತ್ತು ಪುತ್ರ ಮಲ್ಲಿಕಾರ್ಜುನಪ್ಪ ಅವರು ಖುದ್ದು ಗ್ರಾಮಾಂತರ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಜಮೀನಿಗೆ ಹೋಗುವ ದಾರಿ ವಿಚಾರವಾಗಿ ಬಹಳ ವರ್ಷಗಳಿಂದಲೂ ನಡೆದಿತ್ತು ಎಂದು ತಿಳಿದುಬಂದಿದೆ.. ಅಷ್ಟೆ ಅಲ್ಲ ಪ್ರಕರಣ ನ್ಯಾಯಾಲಯದಲ್ಲೂ ದಾಖಲಾಗಿ ವರ್ಷದ ಹಿಂದೆ ನ್ಯಾಯಾಲಯದಲ್ಲಿ ರಾಜಿಯಾಗಿದ್ದರು. ಆದರೆ ನಿನ್ನೆ ಆರೋಪಿತರು ವಿವಾದಿತ ತಿರುಗಾಡುವ ಓಣಿಜಾಗವನ್ನು ಅಗೆದು ದುರಸ್ತಿ ಮಾಡುತ್ತಿದ್ದಾಗ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ಘಟನೆ ಸಂಭವಿಸಿದೆ. ಊರಿಂದ ಸುಮಾರು ಅರ್ಧ ಕಿಮೀ ದೂರದಲ್ಲಿ ಘಟನೆ ನಡೆದಿದ್ದು, ಜನ ಜಾತ್ರೋಪಾದಿಯಲ್ಲಿ ಸೇರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. *ಸ್ಥಳಕ್ಕೆ ಎಸ್ಪಿ, ಎಎಸ್ಪಿ,ಡಿವೈಸ್ಪಿ ಹಾಜರಿದ್ದು ಪರಿಶೀಲನೆ ನಡೆಸಿದ್ದಾರೆ