ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿನ ವಾಹನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಸಾಮಥ್ಯಕ್ಕನುಗುಣವಾಗಿ ಪ್ರವಾಸಿಗರಿಗೆ ಜು. 19ರಿಂದ ಅವಕಾಶ ನೀಡಲಾಗುವುದು.
ಸಪ್ತಗಿರಿಗಳ ಧಾಮ, ಸಪ್ತ ನದಿಗಳ ಉಗಮ ಸ್ಥಾನವಾದ ನಂದಿಬೆಟ್ಟವನ್ನು ವೀಕ್ಷಿಸಲು ಜಿಲ್ಲಾಡಳಿತ ರೂಪಿಸಲಿರುವ ನೂತನ ನಿಯಮ ರೂಪಿಸಲಾಗಿದೆ. ಪ್ರವಾಸಿಗರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಪರಿಸರ ಸಂರಕ್ಷಣೆ, ವಾಹನ ದಟ್ಟಣೆ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ನಂದಿಬೆಟ್ಟದಲ್ಲಿನ ವಾಹನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಸಾಮಥ್ಯಕ್ಕನುಗುಣವಾಗಿ ಪ್ರವಾಸಿಗರಿಗೆ ಜು. 19ರಿಂದ ಅವಕಾಶ ನೀಡಲಾಗುವುದು ಎಂದರು.
ಜುಲೈ 19ರಿಂದ ವಾಹನ ನಿಲುಗಡೆಗೆ ಅವಕಾಶವಿರುವಷ್ಟು ಮಂದಿಯನ್ನು ಮಾತ್ರ ಪ್ರವೇಶ ಪಾಸ್ ನೀಡಿ ನಂದಿಬೆಟ್ಟಕ್ಕೆ ಭೇಟಿ ನೀಡಲು ಯೋಜಿಸಲಾಗಿದೆ ಎಂದರು.
ಶೇ.. 50ರಷ್ಟು ಪಾಸ್ʼಗಳನ್ನು ಆನ್ಲೈನ್ನಲ್ಲಿ. ಶೇ.. 50ರಷ್ಟು ಪಾಸ್ʼ ಗಳನ್ನು ಬೆಟ್ಟಕ್ಕೆ ಪ್ರವೇಶಿಸುವ ಮುಖ್ಯದ್ವಾರದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿ ಪಾಸ್ ಪಡೆಯಬೇಕು. ಆರಂಭದಲ್ಲಿ ತುಸು ಗೊಂದಲವಾದರೂ ಸಹ ಮುಂದಿನ ದಿನಗಳಲ್ಲಿ ಈ ರೀತಿಯ ವ್ಯವಸ್ಥಿತ ವೀಕ್ಷಣೆಯಿಂದ ಪ್ರವಾಸಿತಾಣವನ್ನು ವೈಜ್ಞಾನಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ ಎಂದರು.
ಪ್ರಸ್ತುತ ನಂದಿ ಗಿರಿಧಾಮದ ಮೇಲಿರುವ ವಾಹನ ನಿಲ್ದಾಣದಲ್ಲಿ ಪ್ರಸ್ತುತ 310 ಕಾರು, 550 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಬೆಟ್ಟದ ಕೆಳಭಾಗದಲ್ಲಿ 350 ಕಾರು ಹಾಗೂ 200 ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ. ಈ ನಿಲುಗಡೆಯಲ್ಲಿ ಪಾರ್ಕ್ ಮಾಡಲು ವ್ಯವಸ್ಥೆ ಇರುವ ವಾಹನಗಳಲ್ಲಿನ ಪ್ರವಾಸಿಗರಿಗೆ ಮಾತ್ರ ಪಾಸ್ ವಿತರಿಸಿ ನಂದಿಬೆಟ್ಟ ವೀಕ್ಷಿಸಲು ಅನುಮತಿ ನೀಡಲಾಗುವುದು ಎಂದವರು ಹೇಳಿದರು.
ಆರಂಭದಲ್ಲಿ ಈ ಪ್ರಕ್ರಿಯೆಯು ಒಂದೆರಡು ವಾರ ಭೌತಿಕವಾಗಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆನ್ಲೈನ್ ಮೂಲಕ ನಿರ್ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ತಪ್ಪಲಿನಲ್ಲಿ 7 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ
ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ನಂದಿ ಪ್ರವಾಸ ತಾಣವನ್ನು ಸಂರಕ್ಷಿಸುವ ಜೊತೆಗೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಹಯೋಗದೊಂದಿಗೆ 7 ಎಕರೆ ಜಮೀನು ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿ ಅಲ್ಲಿಂದ ಬಸ್ಗಳ ಮೂಲಕ ಪ್ರವಾಸಿರನ್ನು ನಂದಿ ಗಿರಿಧಾಮಕ್ಕೆ ಕರೆದೊಯ್ಯಲು ನೂತನ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಪರಿಸರ ಸಂರಕ್ಷಣೆ ಮಾಡುವುದರೊಂದಿಗೆ ವಾಹನ ದಟ್ಟಣೆ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಶಾಶ್ವತ ಪರಿಹಾರವಾಗಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಜುಲೈ 14 ರಿಂದಲೇ ಹಲವು ನೂತನ ಕ್ರಮಗಳನ್ನು ಕೈಗೊಂಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಗೋಪಾಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಿತೇಂದ್ರನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.