ಕಾವೇರಿ ನೀರಾವರಿ ನಿಗಮದಿಂದ ತಾರತಮ್ಯ ನೀತಿ: ತನಿಖೆಗೆ ಎಚ್. ಡಿ. ರೇವಣ್ಣ ಒತ್ತಾಯ

ಭುವನಹಳ್ಳಿ ವಿಮಾನ ನಿಲ್ದಾಣ ನಾನು-ಎಚ್.ಡಿ.ಕೆ. ಓಡಾಡಲಿಕ್ಕಲ್ಲ

ಹಾಸನ: ಕಾವೇರಿ ನೀರಾವರಿ ನಿಗಮದಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅನುದಾನವನ್ನು ಬೇಕಾಬಿಟ್ಟಿ ಹಂಚುವ ಮೂಲಕ ತಾರತಮ್ಯ ಮಾಡಿರುವುದನ್ನು ಉನ್ನತ ಮಟ್ಟದ ತನಿಖೆಗೆವಹಿಸುಂತೆ ಮಾಜಿ ಸಚಿವ ಎಚ್. ಡಿ ರೇವಣ್ಣ ಒತ್ತಾಯಿಸಿದ್ದಾರೆ.

ಹಾಸನದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಈಗಾಗಲೇ ಹೇಳಿದ್ದೇನೆ. ಕಾಮಸಮುದ್ರ- ಯಗಚಿ ಯೋಜನೆಯ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಈಗ ಬಿಡುಗಡೆ ಮಾಡಿರುವ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನವನ್ನು ಹಾಸನ ಜಿಲ್ಲೆಯ ಜೆಡಿಎಸ್ ಅಧಿಕಾರದ ವಿಧಾನಸಭಾ ಕ್ಷೇತ್ರಗಳಿಗೆ ಕೇವಲ ಮೂರೂವರೆ ಕೋಟಿ ಬಿಡುಗಡೆ ಮಾಡಲಾಗಿದ್ದು ಯೋಜನೆ ವ್ಯಾಪ್ತಿಗೆ ಬರದಂತಹ ಉಡುಪಿ-ಚಿಕ್ಕಮಗಳೂರು ಸೇರಿದಂತೆ ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮೂಡಿಗೆರೆ ಸೇರಿದಂತೆ ತಲಾ 8 ಕೋಟಿ ಬಿಡುಗಡೆ ಮಾಡುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಒಂದು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ವಿನಿಯೋಗಿಸುತ್ತ ಅಕ್ರಮವೆಸಗಿದ್ದಾರೆ ಎಂದು ಅವರು ಆರೋಪಿಸಿದರು.

ಕಾವೇರಿ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವಂತಹ ಜಿಲ್ಲೆಗಳಿಗೆ ಕಡಿಮೆ ಅನುದಾನ ಬಿಡುಗಡೆ ಮಾಡಿದ್ದು ಈ ನೀರಾವರಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ಹಾಗೂ ಅಚ್ಚುಕಟ್ಟು ಪ್ರದೇಶದ ಜನರಿಗೆ ಸಿಗಬೇಕಾದ ಅನುದಾನವನ್ನು ಬೇರೆಡೆಗೆ ವರ್ಗಾಹಿಸಿ ಯೋಜನೆಗೆ ಸಂಬಂಧವಿಲ್ಲದ ಜಿಲ್ಲೆಗಳಿಗೆ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ತಾರತಮ್ಯ ಮಾಡಿದ್ದಾರೆಂದರು.

ಈ ರೀತಿ ದ್ವೇಷ ರಾಜಕೀಯ ಮಾಡುತ್ತಿದ್ದು ಇದರ ವಿರುದ್ಧ ಹೋರಾಟ ಮಾಡಲಾಗುವುದು; ವಿಧಾನಸಭೆ ಅಧಿವೇಶನವನ್ನು ಆಗಸ್ಟ್ ಎರಡನೇ ವಾರದಲ್ಲಿ ಕರೆಯಲಾಗಿದೆ ಆದರೆ ಮೊದಲ ವಾರದಿಂದ ವಿಧಾನಸಭೆ ಅಧಿವೇಶನ ಕರೆಯುವಂತೆ ಒತ್ತಾಯಿಸಿದರು .

ವಿಮಾನ ನಿಲ್ದಾಣವಾದರೆ ನಾನು- ಎಚ್ ಡಿ ಕೆ ಓಡಾಡುವುದಿಲ್ಲ
ಹಾಸನದ ಭುವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣವಾದರೆ ನಾನು ಅಥವಾ ಎಚ್ ಡಿ ಕುಮಾರಸ್ವಾಮಿ ವಿಮಾನದಲ್ಲಿ ಓಡಾಡುವುದಿಲ್ಲ. ಬದಲಿಗೆ ಜಿಲ್ಲೆಯ ರೈತರಿಗೆ ಅನುಕೂಲವಾಗಲಿ ಎಂದು ನಿಲ್ದಾಣದಕ್ಕೆ ಒತ್ತಾಯ ಮಾಡಲಾಗುತ್ತಿದೆ. ಇಲ್ಲಿ ವಿಮಾನ ಕಾರ್ಗೋ ನಿರ್ಮಾಣ ಮಾಡಿದರೆ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗೆಡ್ಡೆ, ತೆಂಗಿನಕಾಯಿ, ಕಾಫಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಯನ್ನು ಹೊರ ದೇಶಗಳಿಗೆ ರಫ್ತು ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಉದ್ದೇಶದಿಂದ ಮಾತ್ರ ಕಾಮಗಾರಿ ಮಾಡುವಂತೆ ಒತ್ತಾಯಿಸಲಾಗಿದೆ ಇದರಲ್ಲಿ ನಮ್ಮ ಸ್ವಾರ್ಥ ಇಲ್ಲ ಎಂದು ಹೇಳಿದರು.

ಈಗಾಗಲೇ ವಿಮಾನ ನಿಲ್ದಾಣಕ್ಕೆ ಗುರುತಿಸಲಾಗಿರುವ ಭೂಮಿಯನ್ನು ವಶಕ್ಕೆ ಪಡೆದು ಕಾಮಗಾರಿ ಪೂರ್ಣಗೊಳಿಸಬೇಕು ಆದರೆ ಡಿನೋಟಿಫಿಕೇಶನ್ ಮಾಡಲು ಹೊರಟಿದ್ದಾರೆ 2008ರಲ್ಲಿ 446 ಎಕರೆ ಭೂಮಿಗೆ 38 ಕೋಟಿ ರೂ ಹಣ ಮಂಜೂರಾಗಿದ್ದನ್ನು ಯಡಿಯೂರಪ್ಪ ಅವರು ತಡೆಹಿಡಿದರು… ಮುಂದಿನ ಜುಲೈ 19 ರಂದು ವಿಮಾನ ನಿಲ್ದಾಣ ಕಾಮಗಾರಿಗೆ ನಡೆಯದಂತೆ ಮಾಡಿದಂತಹ ಎಲ್ಲ ರೀತಿಯ ತೊಡಕು ದಾಖಲೆ ಸಮೇತ ವಿವರಿಸುತ್ತೇನೆ ಹಾಗೂ ನಿಲ್ದಾಣ ಕಾಮಗಾರಿ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಜುಲೈ 20ರ ನಂತರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ರೇವಣ್ಣ ಎಚ್ಚರಿಕೆ ನೀಡಿದರು.