ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ : ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರಿಗೆ 24-37 ಅಮಾಯಕ ಜನರ ಪ್ರಾಣಕ್ಕಿಂತ ಒಬ್ಬ ಪಕ್ಷದ ಕಾರ್ಯಕರ್ತನ ಪ್ರಾಣವೇ ಹೆಚ್ಚಾಯ್ತೆ ಎಂದು ಚಾಮರಾಜನಗರ ಜಿಲ್ಲಾ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೇ 2ರ ಮಧ್ಯರಾತ್ರಿ ಸಂಭವಿಸಿದ 24 ಜನರ ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ ಎಂದು ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ವರದಿ ಸಲ್ಲಿಸಿತ್ತು. ಅಷ್ಟೆ ಅಲ್ಲ ಕಾಂಗ್ರೆಸ್ ಪಕ್ಷವೂ ಕೂಡ 24 ಅಲ್ಲ 37 ಅಂತ ಆಸ್ಪತ್ರೆಯಲ್ಲಿ ಸತ್ತವರು ಅಂತ ದಾಖಲೆ ಸಮೇತ ಆರೋಪ ಕೂಡ ಮಾಡಿದ್ದರು.
ಇತ್ತೀಚೆಗೆ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಬೊಮ್ಮಲಾಪುರ ಗ್ರಾಮದ ಕಾರ್ಯಕರ್ತ ರವಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕನಿಕರ ಉಂಟಾಗಿ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಭರವಸೆ ನೀಡಿದ್ದರು.
ಅದರಂತೆ ಜು. 30ರಂದು ಭೇಟಿ ನೀಡಿದ್ದಾರೆ.
ಮೌಢ್ಯತೆಗೆ ಜೋತು ಬಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬರೋ ಮುನ್ನ ಚಾಮರಾಜನಗರ ಪವಿತ್ರ ಭೂಮಿ, ಹಾಗೆ ಹೀಗಿ ಅಂತ ಮಾರಿಗುಡಿ ಮುಂಬಭಾಗದ ಕಾರ್ಯಕರ್ತರ ಸಮಾವೇಶದಲ್ಲಿ ಹಾಡಿಹೊಗಳಿದ್ದರು.
ಆದರೆ ತಮ್ಮ ಅಧಿಕಾರದ ಅವಧಿಯಲ್ಲಿ ಇತ್ತ ಮುಖವನ್ನೆ ಮಾಡಲಿಲ್ಲ.
ಕಿಡಿಗೇಡಿಗಳು ಹಚ್ಚಿದ ಕಳಂಕಕ್ಕೂ ತೆರೆ: ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಕಿಡಿಗೇಡಿ ರಾಜಕಾರಣಿಗಳ ಮಾತನ್ನ ಯಡಿಯೂರಪ್ಪ ಅವರ ಅವಧಿಯಲ್ಲಿ ಹುಸಿ ಮಾಡೊ ಮೂಲಕ ಮೌಢ್ಯತೆ ಅಂಧಕಾರಕ್ಕೆ ತೆರೆ ಬಿದ್ದಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ವರ್ಷ ಪೂರೈಸಿದ್ದೇವೆ ಎಂದು ಖುಷಿಪಟ್ಟರೆ ಸದ್ಯ ಆಕ್ಸಿಜನ್ ದುರಂತದಲ್ಲಿ ಬಾರದೆ ಇದ್ದದ್ದು ಒಳ್ಳೆಯದೆ ಆಯ್ತ್. ಒಂದು ವೇಳೆ ಬಂದಿದ್ದರೆ ಅಧಿಕಾರ ಕಿತ್ತೋಗಿದ್ದರೆ ಈ ಕಳಂಕ ಮತ್ತೆ ನಿಜವಾಗುತ್ತಿತ್ತು. ಆ ಸಂದರ್ಭದಲ್ಲಿ ಮೌಢ್ಯತೆಗೆ ಜೋತು ಬಿದ್ದು ಬರದೆ ಇದ್ದದ್ದರಿಂದ ಅಂಟುಕೊಂಡಿದ್ದ ಕಳಂಕ ಹುಸಿಯಾಗಿಸಿದೆ ಎಂದು ಜಿಲ್ಲೆಯಲ್ಲಿ ಜನತೆ ಮಾತನಾಡುತ್ತಿದ್ದಾರೆ.
ದುರಂತ ಎಂದರೆ ಮೇ 2ರಂದು ರಾತ್ರಿ 10.30 ಕ್ಕೆ ಆಸ್ಪತ್ರೆಯಲ್ಲಿ ಆಮ್ಲಜನಕವೇ ಲಭ್ಯವಿರಲಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ. ಎನ್. ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ವಿಶೇಷ ವಿಭಾಗದ ಪೀಠದ ಮುಂದೆ ಸಲ್ಲಿಸಲಾದ ವರದಿಯಲ್ಲಿ ಈ ವಿಷಯ ತಿಳಿಸಲಾಗಿತ್ತು.
ಆಸ್ಪತ್ರೆಯ ಆಡಳಿತ ಮಂಡಳಿ ಜಾಗರೂಕವಾಗಿದಿದ್ದರೇ ಸಮಯೋಚಿತವಾಗಿ ಆಮ್ಲಜನಕ ಸಿಲಿಂಡರ್ ಪೂರೈಸಿದ್ದರೇ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರಲಿಲ್ಲ ಎಂದು ತಿಳಿಸಿದ್ದರೂ ಅಂದಿನ ಸರ್ಕಾರ ಯಾರೊಬ್ಬರ ಮೇಲೂ ಗಂಭೀರವಾಗಿ ಪರಿಗಣಿಸದೇ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಿಲ್ಲ. ಅಷ್ಟೆ ಯಾಕೆ ಸೌಜನ್ಯಕ್ಕೂ ಭೇಟಿ ನೀಡಲಿಲ್ಲ.
ಚಾಮರಾಜನಗರ ಸಾರ್ವಜನಿಕ ವಲಯದಲ್ಲಿ ಎದ್ದಿರೋ ಕಟ್ಟಕಡೆಯ ಪ್ರಶ್ನೆ. 24-37 ಜನರ ಪ್ರಾಣಕ್ಕಿಲ್ಲದ ಬೆಲೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತನ ಮೇಲೆ ವ್ಯಾಮೋಹ ಹೆಚ್ಶಯ್ತೆ ಎಂದು ಎಲ್ಲರ ಮನದಲ್ಲಿ ಮೂಡಿದೆ.