ಸಾವಿಗೆ ಶರಣಾದ ಕಾರ್ಯಕರ್ತನಿಗೆ ಆರ್ಥಿಕ ನೆರವು ನೀಡಿದ ಯಡಿಯೂರಪ್ಪ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಕಾರ್ಯಕರ್ತನ ನಿವಾಸಕ್ಕೆ ಶುಕ್ರವಾರ ಯಡಿಯೂರಪ್ಪ ಅವರು ತೆರಳಿ ಆರ್ಥಿಕ ನೆರವು ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ರವಿ ಅವರ ತಾಯಿ ರೇವಮ್ಮ ಅವರಿಗೆ ಐದು ಲಕ್ಷ ರೂ. ನೆರವು ನೀಡಿ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಯಡಿಯೂರಪ್ಪ, ರವಿ ಆತ್ಮಹತ್ಯೆಗೆ ಶರಣಾಗಿರುವುದು ವೈಯಕ್ತಿಕವಾಗಿ ನೋವು ತಂದಿದ್ದು, ಇಂತಹ ಕೆಲಸಕ್ಕೆ ಕೈಹಾಕಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.

ಐದು ಲಕ್ಷ ರೂಪಾಯಿ ಇಂದು ನೀಡಿದ್ದು, ಮುಂದಿನ ದಿನದಲ್ಲಿ ಮನೆ ದುರಸ್ತಿಗೆ ಇನ್ನೂ ಹೆಚ್ಚುವರಿಯಾಗಿ ಐದು ಲಕ್ಷ ಕೊಡುವುದಾಗಿ ಹೇಳಿದರು.

ಇತ್ತ ಮಾದ್ಯಮದವರು, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತ ಪಟ್ಟಾಗ ಬಾರದೇ ಅಭಿಮಾನಿ ಮೃತ ಪಟ್ಟಾಗ ಬಂದಿದ್ದೀರಾ ಎಂಬ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅಧಿಕಾರಿಗಳು ಇದ್ದು ಕಾರ್ಯ ನಿರ್ವಹಿಸಿದ್ದಾರೆ ಎಂದು ಉತ್ತರ ನೀಡಿ ನುಣುಚಿಕೊಂಡರು.

ಶಾಸಕ ಸಿ.ಎಸ್.ನಿರಂಜನಕುಮಾರ್, ಎನ್.ಮಹೇಶ್, ಎಸ್.ಆರ್.ವಿಶ್ವನಾಥ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.