ಚಿಕ್ಕಬಳ್ಳಾಪುರದಲ್ಲಿ ಕೋವಿಡ್ 3ನೇ ಅಲೆಯ ಆತಂಕವಿಲ್ಲ -ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಪ್ರಮಾಣ ನಿಯಂತ್ರಣದಲ್ಲಿದ್ದು, ಮೂರನೇ ಅಲೆಯ ಆತಂಕವಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನಿಂದ ‘ಆಸರೆ’ ಕಾರ್ಯಕ್ರಮದಡಿ 1 ಲಕ್ಷ ರೂ. ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿ, ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿ ಪರಿಹಾರದ ಮೊತ್ತವನ್ನು ವಿತರಿಸಿ ಸಾಂತ್ವನ ಹೇಳಿದರು.

ಚಿಕ್ಕಬಳ್ಳಾಪುರ ಜನತೆಯ ಆಶೀರ್ವಾದದಿಂದ ಎರಡನೇ ಬಾರಿ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಕೋವಿಡ್ ನಿಯಂತ್ರಿಸುವ ಜವಾಬ್ದಾರಿ ವಹಿಸಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿಕ್ಕಬಳ್ಳಾಪುರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. 14 ದಿನಗಳಿಂದ ಪಾಸಿಟಿವಿಟಿ ದರ ಎರಡಂಕಿಯನ್ನೂ ದಾಟಿಲ್ಲ. ಮೂರನೇ ಅಲೆ ಆರಂಭದ ಮುನ್ಸೂಚನೆ ಕೆಲ ಜಿಲ್ಲೆಗಳಲ್ಲಿ ಕಂಡುಬರುತ್ತಿದೆ. ಆದರೆ ಅಂತಹ ಆತಂಕ ಚಿಕ್ಕಬಳ್ಳಾಪುರದಲ್ಲಿ ಇಲ್ಲ ಎಂದು ತಿಳಿಸಿದರು.

ಮಕ್ಕಳ ವಿಶೇಷ ನಿಗಾ ಘಟಕವನ್ನು ಜಿಲ್ಲೆಯಲ್ಲಿ ಆರಂಭಿಸಲು ಸಿದ್ಧತೆ ನಡೆದಿದ್ದು, ಅದಕ್ಕೆ ಬೇಕಾದ ವೆಂಟಿಲೇಟರ್ ಗಳನ್ನು ಒಂದೆರಡು ದಿನಗಳಲ್ಲಿ ನೀಡಲಾಗುವುದು. ವೈದ್ಯರ ನೇರ ನೇಮಕಾತಿ ಮಾಡಿರುವುದರಿಂದ ಶೇ..90ರಷ್ಟು ವೈದ್ಯರ ಕೊರತೆ ನೀಗಿದೆ ಎಂದರು.

ಈವರೆಗೆ ರಾಜ್ಯದಲ್ಲಿ 3.9 ಕೋಟಿ ಲಸಿಕೆ ನೀಡಿದ್ದು, ಆಗಸ್ಟ್ ಅಂತ್ಯಕ್ಕೆ 4 ಕೋಟಿ ಹಾಗೂ ಸೆಪ್ಟೆಂಬರ್ ಅಂತ್ಯಕ್ಕೆ ಐದೂವರೆ ಕೋಟಿ ಲಸಿಕೆ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.

ಯಾವುದೇ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತ ಹೆಚ್ಚಿಲ್ಲ. ಕೇರಳಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಸರ್ಕಾರ ವಹಿಸಿದೆ ಎಂದವರು ತಿಳಿಸಿದರು.