ದಾವಣಗೆರೆ: ಎಲ್ಲರಿಗೂ ಸಚಿವ ಸ್ಥಾನ ಸಿಗುವ ಅವಕಾಶ ಇರುವುದಿಲ್ಲ. ಈ ಸಮಯದಲ್ಲಿ ಅಸಮಧಾನವಾಗುವುದು ಸಹಜ.
ಅವುಗಳನ್ನು ಸರಿಪಡಿಸಿ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಿದೆ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.
ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಶುಕ್ರವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇನ್ನು ಎಲ್ಲಾ ರೀತಿಯ ಜಾತಿ ಜನಾಂಗಕ್ಕೆ ಸಚಿವ ಸ್ಥಾನ ಸಿಕ್ಕಿದ್ದು, ಕೆಲವೊಂದು ಕಡೆ ಅಸಮಾಧಾನವಾಗಿದೆ ಸರಿಪಡಿಸಬೇಕಿದೆ ಎಂದರು.
ಜನರ ಕಷ್ಟಗಳನ್ನು ತಿಳಿಯಲು ರಾಜ್ಯ ಪ್ರವಾಸ ಮಾಡಿ ಎಂದು ಮುಖ್ಯ ಮಂತ್ರಿ ಸೂಚನೆ ನೀಡಿದ್ದರಿಂದ ಪ್ರತಿಯೊಬ್ಬರೂ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಜಮೀರ್ ಅಹ್ಮದ್ ನಿವಾಸದ ಮೇಲೆ ಮೇಲೆ ಆದಾಯ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ತಪ್ಪು ಮಾಡಿದ್ದಾರೋ ಅವರನ್ನು ತನಿಖೆ ಮಾಡಲು ಇಲಾಖೆಯ ತಂಡ ಇದೆ. ಯಾರು ತಪ್ಪು ಮಾಡ್ತಾರೋ ಅವರನ್ನು ತನಿಖೆ ಮಾಡ್ತಾರೆ ಎಂದು ತಿಳಿಸಿದರು.
ಬಿಜೆಪಿಯಲ್ಲು ಹೆಚ್ಚು ಆದಾಯ ಗಳಿಸಿದ ನಾಯಕರಿದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯಲ್ಲಿ ಯಾರಾದರೂ ಅಂತವರು ಇದ್ದರೆ ಸಿದ್ದರಾಮಯ್ಯನವರು ಪಟ್ಟಿ ಬಿಡುಗಡೆ ಮಾಡಲಿ, ಯಾರು ತಪ್ಪು ಮಾಡಿದ್ದರೆ ಅವರ ಮೇಲೆ ದೂರು ನೀಡಲಿ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆ ಹಂಚಿಕೆ ಮುಖ್ಯಮಂತ್ರಿ ಗಳ ವಿವೇಚನೆಗೆ ಬಿಟ್ಟಿದ್ದು, ಯಾವಾಗ ಖಾತೆ ಹಂಚಿಕೆ ಮಾಡ್ತಾರೆ ಎಂದು ಅವರೇ ನಿರ್ಧಾರ ಮಾಡ್ತಾರೆ, ಖಾತೆ ನೀಡುವುದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ನಾನು ಇಂತಹದ್ದೇ ಖಾತೆಯನ್ನು ನೀಡಿ ಎಂದು ಕೇಳಿಲ್ಲ, ಯಾವ ಖಾತೆಯನ್ನು ನೀಡಿದರೂ ನಿಭಾಯಿಸಲಿದ್ದೇನೆ ಎಂದರು.