ನಾನು ಅತೃಪ್ತ ಶಾಸಕ ಅಲ್ಲ, ತೃಪ್ತ ಶಾಸಕ -ಸುರಪುರ ಶಾಸಕ ರಾಜುಗೌಡ

ಯಾದಗಿರಿ: ನಾನು ಅತೃಪ್ತ ಶಾಸಕ ಅಲ್ಲ; ತೃಪ್ತ ಶಾಸಕ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ.

ಯಾದಗಿರಿಯಲ್ಲಿ ಶಾಸಕ ರಾಜುಗೌಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದರು.

ಸಚಿವ ಸ್ಥಾನ ಸಿಕ್ಕಿಲ್ಲ ಅಂತ ನಾನೇನು ಬೇಜಾರು ಮಾಡಿಕೊಂಡಿಲ್ಲ, ನಾನು ಖುಷಿಯಾಗುದ್ದೇನೆ ಎಂದು ಅವರು ಹೇಳಿದರು.

ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ನಾನು ಆಸೆ ಇಟ್ಟುಕೊಂಡು ಕೂತಿಲ್ಲ. 29 ಜನರಲ್ಲಿ ನನಗೆ ಸ್ಥಾನ ಸಿಕ್ಕಿಲ್ಲ ಅಂದ ಮೇಲೆ ಇನ್ನುಳಿದ ನಾಲ್ಕು ಸಚಿವ ಸ್ಥಾನದಲ್ಲಿ ಸಿಗುತ್ತೆ ಅನ್ನೋ ಆಸೆ ನನಗಿಲ್ಲ ಎಂದರು.

ಭಿಕ್ಷೆ ಬೇಡಿ ಸಚಿವಸ್ಥಾನ ಪಡೆಯಲ್ಲ ಎಂಬ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇನ್ನು ಯುವಕನಿದ್ದೇನೆ ಅದೇ ಜೋಶ್ ನಲ್ಲಿ ಹೆಳಿದ್ದೇನೆ. ಬಿ. ಸಿ ನಾಗೇಶ್ ಅವರು ಅಪ್ಲಿಕೇಷನ್ ಹಾಕಿಲ್ಲ. ಆದರೂ ಅವರಿಗೆ ಸಚಿವಸ್ಥಾನ ಹುಡುಕಿಕೊಂಡು ಬಂದಿದೆ.
ನನಗೂ ಆ ರೀತಿಯಾಗಿ ಸಚಿವಸ್ಥಾನ ಬಂದರು ಬರಲಿ ಅಂತ ಆ ರೀತಿಯಾಗಿ ಹೇಳಿದ್ದೇನೆಂದರು.

ನನ್ನ ಸ್ನೇಹಿತ ಸಿಸಿ ಪಾಟೀಲ್ ತಾಳ್ಮೆಯಿಂದ ಇದ್ದ. ಅದಕ್ಕೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ. ತಾಳ್ಮೆಯಿಂದ ಇದ್ದೋರಿಗೆ ಒಳ್ಳೆಯ ಕಾಲ ಬಂದೆ ಬರುತ್ತೆ ಎಂದರು.

ನನಗೆ ಮಂತ್ರಿ ಸ್ಥಾನ ಸಿಗದೇ ಇರಬಹುದು, ಬಟ್ ನಾನು ಹೇಳಿದ ಎರಡು ಮೂರು ಜನಕ್ಕೆ ಸ್ಥಾನ ಸಿಕ್ಕಿದೆ ಎಂದು ಅವರು ತಿಳಿಸಿದರು.

ರಾಜ ಭವನದ ಒಳಗಡೆ ಹೋಗೊವರೆಗೂ ನನ್ನ ಹೆಸರಿತ್ತು. ಆಮೇಲೆ ನನಗೆ ಅದೃಷ್ಟದ ಕೊರತೆ ಇತ್ತು ಇದರಿಂದ ನನಗೆ ಸಚಿವ ಸ್ಥಾನ ಮಿಸ್ ಆಗಿದೆ. ಒಳ್ಳೆಯ ರೀತಿಯಿಂದ ಕೆಲಸ ಮಾಡೋಣ, ಸ್ಥಾನ ಸಿಕ್ಕರೂ ಸಿಗಬಹುದು ಎಂದ ಅವರು, ಮುಂದೆ ಅನಿವಾರ್ಯವಾಗಿ ರಾಜು ಗೌಡರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವಂತೆ ನಾನು ಕೆಲಸ ಮಾಡಿ ತೊರಿಸುತ್ತೇನೆಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜುಗೌಡ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಅನ್ನೊ ವಿಚಾರ ನನ್ನ ತಲೆಯಲ್ಲಿ ಇಲ್ಲ. ಸುಕಾ ಸುಮ್ಮನೆ ಏನೇನೋ ಕೆಳಬೇಡಿ, ನಾನ್ಯಾಕೆ ಬೇರೆ ಪಕ್ಷಕ್ಕೆ ಹೋಗಲಿ ಎಂದರು.

ಬಸವರಾಜ ಬೊಮ್ಮಾಯಿಯವರು ನನಗೆ ಏಕವಚನದಲ್ಲಿ ಮಾತನಾಡುವಷ್ಟು ಆಪ್ತರಿದ್ದಾರೆ. ಅವರ ನಮ್ಮ ಸಂಬಂಧ ತುಂಬಾ ಹಳೆಯದು. ಇಷ್ಟೇಲ್ಲಾ ಇರಬೇಕಾದ್ರೆ ನಾನು ಬೇರೆ ಪಕ್ಷಕ್ಕೆ ಯಾಕೆ ಹೋಗಲಿ ಬಿಜೆಪಿಯಲ್ಲಿ ನಾನು ಪ್ರಂಟ್ ಲೈನ್ ನಲ್ಲಿ ಇದ್ದೇನೆ.
ಬಿಜೆಪಿ ಪಕ್ಷ ನನಗೇನು ಮೋಸ ಮಾಡಿಲ್ಲ, ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತವೆ ಅಷ್ಟೇ ಎಂದರು.

ನನಗೆ ಸಚಿವ ಸ್ಥಾನ ಯಾಕೆ ತಪ್ಪಿದೆ ಅನ್ನೋದು ನನಗೆ ಗೊತ್ತಿದೆ ಅದನ್ನು ಬಹಿರಂಗ ಪಡಿಸಲು ಆಗಲ್ಲ. ರೆಬಲ್ ಆಗಿ ಬ್ಲಾಕ್ ಮೇಲ್ ಮಾಡಿ ಅಧಿಕಾರ ಪಡೆಯೋದನ್ನ ನನ್ನ ತಾಯಿ ನನಗೆ ಕಲಿಸಿಲ್ಲ ಎಂದು ಅವರು ತಿಳಿಸಿದರು.