ವಿಶ್ವ ಅಂಗಾಂಗ ದಾನ ದಿನ: ಕೆಲವು ಜನರಿಗೆ ಬದುಕು

ʼವಿಶ್ವ ಅಂಗಾಂಗ ದಾನ ದಿನʼ (ಅಗಸ್ಟ್‌ 13)ದ ನಿಮಿತ್ತ    ಡಾ.ಗುರುಪ್ರಸಾದ್‌ ರಾವ್‌ ಹವಲ್ದಾರ್‌ ಬರೆದಿರುವ ಲೇಖನ  

ಜನವರಿಯಲ್ಲಿ ದೆಹಲಿಯ 20 ತಿಂಗಳ ಮಗು ಧನಿಷ್ಥಾ ಆಟವಾಡುವಾಗ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣವೇ ದೆಹಲಿಯ ಶ್ರೀ ಗಂಗಾರಾಂ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ, ಕೊನೆಯುಸಿರೆಳೆದಳು. ಅವಳ ಮಿದುಳು ಸ್ಥಗಿತಗೊಂಡಿದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದಾಗ ಆ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಮತ್ತು ಇತರರ ಜೀವ ಉಳಿಸಲು ಹೆತ್ತವರು ನಿರ್ಧರಿಸಿದರು. ಧನಿಷ್ಥಾಳ ಅಂಗಾಂಗಗಳು ಉತ್ತಮ ಸ್ಥಿತಿಯಲ್ಲಿದ್ದದ್ದರಿಂದ ಅಂಗಾಂಗ ಕಸಿಗೆ ಮುಂದಾದರು.

ಧನಿಷ್ಥಾಳ ಹೃದಯ, ಯಕೃತ್ತು, ಎರಡೂ ಮೂತ್ರಪಿಂಡಗಳು ಮತ್ತು ಎರಡೂ ಕಾರ್ನಿಯಾಗಳನ್ನು ತೆಗೆದು ಐವರು ರೋಗಿಗಳಿಗೆ ಕಸಿ ಮಾಡಲಾಯಿತು.

ಈ ರೋಗಿಗಳಲ್ಲಿ ಮೂತ್ರಪಿಂಡ ವಯಸ್ಕರರಿಗೆ ಹೋದರೆ, ಹೃದಯ ಮತ್ತು ಯಕೃತ್ತು ಇಬ್ಬರು ಮಕ್ಕಳಿಗೆ ಸಿಕ್ಕಿದೆ. ಕಾರ್ನಿಯಾ ಅನ್ನು ಸಂಗ್ರಹಿಸಿಡಲಾಗಿದೆ. ಈ ಅಂಗಾಂಗ ದಾನದಿಂದ ಮಗು ಧನಿಷ್ಥಾ ಭಾರತದ ಮೊದಲ ಕಿರಿಯ ಕ್ಯಾಡಾವೆರ್‌ ಡೊನರ್‌ ಆದಳು.

“ನಾವು ಆಸ್ಪತ್ರೆಯಲ್ಲಿರಬೇಕಾದರೆ ಅಂಗಾಂಗಗಳ ಅವಶ್ಯಕತೆ ಇದ್ದ ಹಲವರನ್ನು ಭೇಟಿಯಾದೆವು. ನಮ್ಮ ಮಗಳು ಈಗ ಬದುಕಿರದಿದ್ದರೂ ಅವಳು ಇನ್ನೊಬ್ಬರಿಗೆ ಜೀವ ನೀಡಿ ಅವರಲ್ಲಿ ಜೀವಿಸುತ್ತಿದ್ದಾಳೆ” ಎಂಬ ಮಾತು ಮಗುವಿನ ತಂದೆ ಆಶಿಶ್‌ ಕುಮಾರ್‌ ಅವರದು. ಅದೇ ರೀತಿ ನಮ್ಮ ಕನ್ನಡದ ಹೆಮ್ಮೆಯ ನಟ ಸಂಚಾರಿ ವಿಜಯ್ ಅವರು ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಇದ್ದಾಗ ಅವರ ಮಿದುಳು ನಿಷ್ಕ್ರಿಯವಾಗಿತ್ತು. ಆಗ ಕುಟುಂಬದವರು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಸಂಚಾರಿ ವಿಜಯ್ ಸಾವಿನ ನಂತರವೂ ಉಳಿಸಿದ್ದಾರೆ.

ಅವರ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವಾಲ್ವ್ಸ್ ದಾನ ಮಾಡಲಾಯಿತು. ಆ ಮೂಲಕ ಏಳು ಜನರ ಬಾಳಿನಲ್ಲಿ ಸೇರಿಕೊಳ್ಳುವ ಮೂಲಕ ಸಂಚಾರಿ ವಿಜಯ್ ಬೆಳಕಾದರು ಎನ್ನುವುದಕ್ಕಿಂತ ಅಮರರಾದರು ಎನ್ನಬಹುದು.

ಮೇಲಿನ ಎರಡು ಘಟನೆ ಹೇಳಲು ಕಾರಣ ಅಂಗಾಂಗ ದಾನ ಅನ್ನುವ ಪರಿಕಲ್ಪನೆ. ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಈ ಬಗ್ಗೆ ತಿಳಿವಳಿಕೆಯೇ ಇಲ್ಲ. ನಮ್ಮಲ್ಲಿ ಮನುಷ್ಯ ಸತ್ತ ಮೇಲೆ ಆ ದೇಹವನ್ನು ಮಣ್ಣಿನಲ್ಲಿ ಹೂಳುವುದು ಅಥವಾ ಬೆಂಕಿಯಲ್ಲಿ ಸುಟ್ಟುಬಿಡುತ್ತೇವೆ. ಆದರೆ, ಅಂಗಾಂಗ ದಾನ ಮಾಡಿದರೆ ನಮ್ಮ ದೇಹದಿಂದ ಕೆಲ ಜನರಿಗಾದರೂ ಹೊಸ ಬದುಕು ಸಿಗುತ್ತದೆ. ಈ ಮೂಲಕ ನಾವು ಸತ್ತರೂ ಮತ್ತೊಬ್ಬರಿಗೆ ಬದುಕು ನೀಡಬಹುದು ಎಂಬುದನ್ನು ಅರಿಯಬೇಕಿದೆ.

ಸಮೀಕ್ಷೆ ಮತ್ತು ಅಧ್ಯಯನಗಳ ಪ್ರಕಾರ ಭಾರತ ದೇಶದಲ್ಲಿ ಪ್ರತಿ ವರ್ಷ ಸುಮಾರು 5,00,000 ಜನ ರೋಗಿಗಳು ಅಂಗಾಂಗಗಳ ಲಭ್ಯತೆ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ. 1,50,000 ಮೂತ್ರಕೋಶಗಳ ದಾನದ ಅಗತ್ಯವಿದ್ದು, ಲಭ್ಯವಿರುವುದು ಕೇವಲ 6,000 ಮಾತ್ರ. 50,000 ಯಕೃತ್ತುಗಳಿಗೆ ಬೇಡಿಕೆ ಇದ್ದು, 1,500 ಮಾತ್ರ ಸಿಗುತ್ತಿದೆ. ಸರಿಸುಮಾರು 50,000 ಹೃದಯಗಳ ಅಗತ್ಯವಿದ್ದಲ್ಲಿ ಲಭ್ಯವಿರುವುದು ಕೇವಲ 15 ಮಾತ್ರ. 11,00,000 ಜನರು ವಿಶ್ವದಾದ್ಯಂತ ಹೊಸ ಕಣ್ಣಿನ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಕೆಲ ಅಂಕಿ–ಅಂಶಗಳು ಇದನ್ನು ದೃಢೀಕರಿಸುತ್ತಿವೆ. ದೇಶದಲ್ಲಿ ಸುಮಾರು 5 ಲಕ್ಷ ಜನರು ಅಂಗಾಂಗಕ್ಕಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಅಗತ್ಯ ಅಂಗಾಂಗ ಲಭ್ಯವಾಗದೆ ಪ್ರತಿ ವರ್ಷ ಲಕ್ಷಾಂತರ ಜನ ಪ್ರಾಣ ಬಿಡುತ್ತಿದ್ದಾರೆ. ಪ್ರತಿ 12 ನಿಮಿಷಕ್ಕೆ ಅಂಗಾಂಗ ಅಗತ್ಯವಿರುವವರ ಪಟ್ಟಿಗೆ ಒಬ್ಬ ರೋಗಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ!

ಅಂಕಿ–ಅಂಶಗಳ ಪ್ರಕಾರ ದೇಶದಲ್ಲಿ ವರ್ಷಕ್ಕೆ 1.5 ಲಕ್ಷ ಜನರು ಮೂತ್ರಪಿಂಡ (ಕಿಡ್ನಿ) ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಈ ಪೈಕಿ 5 ಸಾವಿರ ಜನರಿಗೆ ಮಾತ್ರ ಬದಲಿ ಮೂತ್ರಪಿಂಡ ಸಿಗುತ್ತಿದೆ ಎಂಬ ಅಂಶವು ಅಂಗಾಂಗಗಳ ಅವಶ್ಯಕತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ.

ಮಿದುಳು ನಿಷ್ಕ್ರಿಯತೆ, ಅಪಘಾತ ಮೊದಲಾದ ಕಾರಣದಿಂದ ಮೃತಪಡುವವರ ಪೈಕಿ ಪ್ರತಿ ವರ್ಷ ಸಾವಿರ ಜನರ ಅಂಗಾಂಗಗಳನ್ನು ಮಾತ್ರ ದಾನ ಮಾಡಲಾಗುತ್ತಿದೆ. ದಾನ ಮಾಡಲು ಮುಂದಾಗುವವರ ಪ್ರಮಾಣ ಏರಿಕೆಯಾಗುತ್ತಿದ್ದರೂ, ಅದರ ವೇಗ ನಿಧಾನಗತಿಯಲ್ಲಿದೆ.

ಅಂಗಾಂಗ ದಾನ ಹೇಗೆ? ಎತ್ತ?

ಒಂದು ನಿರ್ದಿಷ್ಟ ಕಾರ್ಯನಿರ್ವಹಣೆ ಮಾಡುವ ದೇಹದ ಭಾಗವನ್ನು ಅಂಗ ಎನ್ನಬಹುದು. ಉದಾಹರಣೆಗೆ ಹೃದಯ, ಶ್ವಾಸಕೋಶ, ಕಿಡ್ನಿ, ಯಕೃತ್ ಮುಂತಾದವು. ಕೊನೆಯ ಹಂತದಲ್ಲಿರುವ ವ್ಯಕ್ತಿಯೊಬ್ಬನಿಂದ ಅಂಗ ಕಸಿ ಅಗತ್ಯವಿರುವ ವ್ಯಕ್ತಿಯೊಬ್ಬನಿಗೆ ಅಂಗವನ್ನು ಉಡುಗೊರೆಯಾಗಿ ನೀಡಬಹುದು.

ಒಬ್ಬ ವ್ಯಕ್ತಿ ಕನಿಷ್ಠ ಎಂಟು ಜನರ ಜೀವ ಉಳಿಸಬಹುದು. ಬದುಕಿದ್ದಾಗ ರಕ್ತ, ವೀರ್ಯ, ಚರ್ಮ, ಮೂಳೆಮಜ್ಜೆ ದಾನ, ಜೀವಕೋಶ, ದ್ರವ್ಯ ದಾನ ಮಾಡಬಹುದು. ಜತೆಗೆ
ಮೂತ್ರಪಿಂಡ (ಕಿಡ್ನಿ), ಯಕೃತ್ (ಲಿವರ್), ರಕ್ತನಾಳ, ಗರ್ಭಕೋಶ, ಸಣ್ಣ ಕರುಳು, ಮೇದೋಜೀರಕ ಗ್ರಂಥಿ, ಹೃದಯ, ಅಂಡಾಣು.. ಇತ್ಯಾದಿಗಳನ್ನು ದಾನ ಮಾಡಬಹುದು.
ನೇತ್ರದಾನ, ದೇಹದಾನಕ್ಕೆ ಬದುಕಿದ್ದಾಗಲೇ ನೋಂದಾಯಿಸಿಕೊಳ್ಳಬಹುದು. ಇದೇ ರೀತಿ ಅಂಗಾಂಗ ದಾನಕ್ಕೂ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಮಕ್ಕಳು, ವೃದ್ಧರು ಯಾರೂ ಬೇಕಾದರೂ ಅಂಗಾಂಗ ದಾನ ಮಾಡಬಹುದು. ಬ್ರೈನ್ ಡೆಡ್ ಆದ ಸಂದರ್ಭದಲ್ಲಿ ಕುಟುಂಬಸ್ಥರ ಅನುಮತಿ ಪಡೆದ ಬಳಿಕ ಆಸ್ಪತ್ರೆಯವರು ಪ್ರಕ್ರಿಯೆ ಮುಂದುವರಿಸಬಹುದು. ಅದಕ್ಕೊಂದು ಪ್ರತ್ಯೇಕ ನಿಯಮಾವಳಿಗಳಿವೆ.

ಬ್ರೈನ್ ಡೆಡ್ ಎಂದರೇನು?

ಒಬ್ಬ ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡರೆ ಅಥವಾ ಕ್ಲಿನಿಕಲಿ ಡೆಡ್ ಎಂದು ಘೋಷಿಸಿದರೆ, ಅಂಥ ವ್ಯಕ್ತಿ ಅಥವಾ ಮಿದುಳು ನಿಷ್ಕ್ರಿಯ (brain stem death)ವಾದ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಬಹುದು. ಇದಕ್ಕೆ 5-6 ಗಂಟೆಗಳ ಅವಧಿ ಇರುತ್ತದೆ. ತಡವಾದರೆ ಅಂಗಾಂಗಗಳು ಪ್ರಯೋಜನಕ್ಕೆ ಬರುವುದಿಲ್ಲ. ಅಂಗಾಂಗ ದಾನಕ್ಕೆ ಬಂಧು ಮಿತ್ರರ ಸಮ್ಮತಿ ಅಗತ್ಯ. ವೆಂಟಿಲೇಟರ್ ತೆಗೆಯುವುದಕ್ಕೂ ಅನುಮತಿ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ಇದಾದ ಬಳಿಕವಷ್ಟೇ ಮುಂದಿನ ಪ್ರಕ್ರಿಯೆ ನಡೆಸಲಾಗುತ್ತದೆ.

ಅಂಗಾಂಗ ದಾನಕ್ಕೆ ಒಪ್ಪಿಗೆ ಅಗತ್ಯ

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಪೂರ್ವಾನುಮತಿ ಪತ್ರ ಇದ್ದರೆ ಅಥವಾ ಪ್ರಸ್ತುತ ಪರಿಸ್ಥಿತಿಯಲ್ಲಿ ಕುಟುಂಬಸ್ಥರ ಸಮ್ಮತಿ ದೊರತ ಬಳಿಕ ಅಂಗಾಂಗ ದಾನ ಪ್ರಕ್ರಿಯೆ ಆರಂಭಿಸಬಹುದು. ಮಕ್ಕಳ ಸಹಿತ ವೃದ್ಧರ ತನಕ ಆರೋಗ್ಯವಂಥ ಅಂಗಾಂಗಗಳನ್ನು ಕಸಿ ಮಾಡುವ ಮೂಲಕ ಮತ್ತೊಬ್ಬರಿಗೆ ನೀಡಬಹುದು. ಸಂಚಾರಿ ವಿಜಯ್‌ ಪ್ರಕರಣದಲ್ಲಿ ನಡೆದ ಪ್ರಕ್ರಿಯೆಗಳನ್ನು ಎಲ್ಲರೂ ಒಮ್ಮೆ ನೆನಪು ಮಾಡಿಕೊಳ್ಳಬಹುದು.

ಒಬ್ಬ ವ್ಯಕ್ತಿ ಬದುಕಿದ್ದಾಗಲೇ ತನ್ನ ಮರಣ ನಂತರ ಅಂಗಾಂಗ ದಾನ ಮಾಡಲು ಬಯಸಿ ಆರ್ಗನ್ ಡೋನರ್ ಕಾರ್ಡ್ ಪಡೆಯಬಹುದು. ಈ ಬಗ್ಗೆ ತನ್ನ ಬಂಧುಮಿತ್ರರಿಗೆ ತಿಳಿಸಬೇಕಾಗುತ್ತದೆ. ಈ ಬಗ್ಗೆ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ಆಸ್ಪತ್ರೆಯವರು ಮುಂದಿನ ಕಾರ್ಯ ನೆರವೇರಿಸುತ್ತಾರೆ.

ಮಾನವ ಅಂಗಾಂಗಗಳ ಕಸಿ ಕಾಯ್ದೆಯೂ ಇದೆ

ಮಾನವ ಅಂಗಾಂಗಗಳ ಕಸಿ ಕಾಯ್ದೆ-1994ರ ಅಡಿಯಲ್ಲಿ ‘ಮಿದುಳು ಸಾವನ್ನು’ ಸಾವು ಎಂದು ಒಪ್ಪಲಾಗಿದೆ. ಮಿದುಳಿನ ಕಾಂಡದ ಎಲ್ಲಾ ಕಾರ್ಯಗಳನ್ನು ಶಾಶ್ವತವಾಗಿ ಮತ್ತು ಮಾರ್ಪಡಿಸಲಾಗದ ಹಂತದ ಸ್ಥಿತಿ ವಿಭಾಗ 3ರ ಉಪ ಪರಿಚ್ಛೇದ (6) ಅಡಿಯಲ್ಲಿ ಪ್ರಮಾಣೀಕರಿಸಿದೆ. ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಾಂಗ ದಾನ ನಿರ್ವಹಣೆ ನಡೆಸುವ ಜೀವನ ಸಾರ್ಥಕತೆ ವಿಭಾಗದಲ್ಲಿ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ ತಾಣದಲ್ಲಿ ಪಡೆದುಕೊಳ್ಳಬಹುದು. ಜತೆಗೆ ಅಂಗಾಂಗ ದಾನದ ಬಗ್ಗೆ ಇರುವ ಪ್ರಶ್ನೆಗಳಿಗೂ ಉತ್ತರ ಇಲ್ಲಿ ಸಿಗುತ್ತದೆ. ಮಾಹಿತಿ ಬೆಕಿದ್ದವರು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಬಹುದು. (https://www.jeevasarthakathe.karnataka.gov.in/Website/Faqs3.html)

ನುರಿತ ತಜ್ಞರು ಪರಿಶೀಲಿಸಿ ಅನುಮತಿ ನೀಡಿದ ಬಳಿಕ ಸಂಬಂಧಪಟ್ಟ ಆಸ್ಪತ್ರೆ ವೈದ್ಯರು ಮುಂದಿನ ಪ್ರಕ್ರಿಯೆ (ಅಂಗಾಂಗ ಬೇರ್ಪಡಿಸಿ, ಕಸಿಗೆ ಲಭ್ಯವಾಗಿಸುವುದು)ಗೆ ಚಾಲನೆ ನೀಡಬಹುದು. ದಾನ ಪಡೆಯುವವರ ಆದ್ಯತಾ ಪಟ್ಟಿ ಮೇರೆಗೆ ಅಂಗಾಂಗಗಳು ಲಭ್ಯವಾಗುತ್ತದೆ.

ಅಂಗಾಂಗ ದಾನದ ಮಹತ್ವದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ಅಗಸ್ಟ್‌ 13ರಂದು ವಿಶ್ವ ಅಂಗಾಂಗ ದಾನ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ. ದೇಹದಾನ ಮತ್ತು ನೇತ್ರದಾನ ಜತೆಗೆ ಅಂಗಾಂಗ ದಾನದ ಬಗ್ಗೆ ಕೂಡ ಜಾಗೃತಿ ಹೆಚ್ಚಾಗಬೇಕಾಗಿದೆ,‌ ಭಾರತದಂತಹ ಅತ್ಯಧಿಕ ಜನಸಂಖ್ಯೆ ಇರುವ ದೇಶದಲ್ಲಿ ಅಂಗಾಂಗಳಿಗೆ ಇರುವ ಪರದಾಟವನ್ನು ಗಮನಿಸಿದರೆ ಜಾಗೃತಿಯ ಕೊರತೆ ಎದ್ದು ಕಾಣುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಅಂಗಾಂಗ ದಾನ ಘೋಷಣೆ ಮಾಡುವ ಅಗತ್ಯವಿದೆ. ದೇಶದಲ್ಲಿ ನಿತ್ಯ 400 ಜನರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಪೈಕಿ ಮಿದುಳು ನಿಷ್ಕ್ರಿಯಗೊಂಡವರ ದೇಹದ ಇತರೆ ಅಂಗಗಳನ್ನು ದಾನ ಮಾಡಲು ಅವಕಾಶವಿದೆ.

‘ಪ್ರತಿ ಒಂದು ಮಿಲಿಯನ್ ಜನಸಂಖ್ಯೆಯಲ್ಲಿ ಅಂಗಾಂಗ ದಾನದ ಪ್ರಮಾಣ ಕೇವಲ ಶೇ.0.26ರಷ್ಟಿದೆ. ವರ್ಷದಿಂದ ವರ್ಷಕ್ಕೆ ಅಂಗಾಂಗ ದಾನ ಬಯಸುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅರ್ಧ ಮಿಲಿಯನ್‌ನಷ್ಟು ಭಾರತೀಯರು ಅಂಗಾಂಗ ದಾನದ ಅಗತ್ಯವನ್ನು ಎದುರಿಸುತ್ತಿದ್ದಾರೆ. ಮಾನವನ ಅಂಗಗಳು ಅತ್ಯಂತ ಅಮೂಲ್ಯವಾದದ್ದು ಮತ್ತು ಯಾರಾದರೂ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರೆ ಅವರು ನಿಜವಾಗಿಯೂ ತಮ್ಮ ಜೀವನವನ್ನು ಇನ್ನೊಂದು ಜೀವಕ್ಕೆ ವರ್ಗಾಯಿಸಿ ತಮ್ಮ ಜೀವನವನ್ನೇ ವಿಸ್ತರಿಸಿಕೊಂಡಂತೆ’ ಆಗುತ್ತದೆ. ಅದರೆ ಭಯ, ಸಾಮಾಜಿಕ ಕಳಂಕಕ್ಕೆ ಹೆದರಿ ಜನರು ಇದರಿಂದ ಹಿಂದೆ ಸರಿಯುತ್ತಿದ್ದಾರೆ. ಇನ್ನಾದರೂ ಜನರು ಸಂಚಾರಿ ವಿಜಯ್ ಹಾದಿಯನ್ನು ಅನುಸರಿಸಲಿ ಎಂಬುದೇ ನಮ್ಮ ಆಶಯ.