ಕೋವಿಡ್ಡೋತ್ತರ ಭಾರತ ಕಟ್ಟಲು ತಮ್ಮ ಕಸನು ಬಿಚ್ಚಿಟ್ಟ ಪ್ರಧಾನಿ ಮೋದಿ

ನವದೆಹಲಿ: ಸ್ವಾತಂತ್ರ್ಯೋತ್ಸವದ ʼಆಜಾದಿ ಅಮೃತ ಮಹೋತ್ಸವʼದ ನಿಮಿತ್ತ ದೇಶ ರಾಜಧಾನಿ ನವದೆಹಲಿಯ ಕೆಂಪುಕೋಟೆ ಮೇಲೆ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸರ್ವೋನ್ನತ ಅಭಿವೃದ್ಧಿಗೆ 10 ಅಂಶಗಳ ದಿಕ್ಸೂಚಿಯನ್ನು ಮಂಡಿಸಿದರು.

ಒಂದೆಡೆ ದೇಶ ಎದುರಿಸುತ್ತಿರುವ ಸವಾಲುಗಳನ್ನು ಜನರಿಗೆ ನೆನಪು ಮಾಡುತ್ತಲೇ, ಇನ್ನೊಂದೆಡೆ ಕೋವಿಡ್ಡೋತ್ತರ ಭಾರತವನ್ನು ಕಟ್ಟಲು ತಮ್ಮ ಕಸನುಗಳನ್ನು ಬಿಚ್ಚಿಟ್ಟ ಪ್ರಧಾನಿ, ಅವುಗಳನ್ನು ಸಾಕಾರ ಮಾಡುವ ಬಗೆಯನ್ನೂ ಲಾಲ್ಕಿಲಾ ಮೇಲಿನ ಭಾಷಣದಲ್ಲಿ ಸವಿಸ್ತಾರವಾಗಿ ಹೇಳಿದರು.

  1. 25 ವರ್ಷಗಳಲ್ಲಿ ನವ ಭಾರತ
    ಮುಂಬರುವ 25 ವರ್ಷಗಳಲ್ಲಿ ನಮ್ಮ ದೇಶವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಆ ಹೊತ್ತಿಗೆ ಭಾರತದ ಜಗತ್ತಿನ ಅತಿ ಬೃಹತ್ ಶಕ್ತಿಯಾಗಿ ಹೊರಹೊಮ್ಮಬೇಕು. ಅಲ್ಲಿವರೆಗೂ ನಮಗೆ ವಿಶ್ರಾಂತಿ ಎಂಬುದೇ ಇರಬಾರದು. ನಮ್ಮ ಗುರಿ ಏನಿದ್ದರೂ ಭಾರತದ ನಿರ್ಮಾಣವೇ ಆಗಿರಬೇಕು ಹಾಗೂ ಯಾವ ರಾಷ್ಟ್ರಕ್ಕೂ ನಾವು ಕಡಿಮೆ ಇಲ್ಲ ಎನ್ನುವ ಕೆಚ್ಚೆದೆಯ ಗುರಿಯೊಂದಿಗೆ ಎಲ್ಲರೂ ಹೆಜ್ಜೆ ಹಾಕಬೇಕು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಎಂಬುದು ಈ ಪಯಣದಲ್ಲಿ ಮಹಳ ಮುಖ್ಯವಾಗುತ್ತದೆ.

2.ರಾಷ್ಟ್ರೀಯ ಹೈಡ್ರೋಜನ್ ಮಿಷನ್
ಮುಂದಿನ ಇಪ್ಪತ್ತೈದು ವರ್ಷಗಳ ಒಳಗೆ ಕಾರ್ಯಕತ ಮಾಡಲೇಬೇಕಾದ ಗುರಿಗಳನ್ನು ನಾನು ಪ್ರಸ್ತಾಪ ಮಾಡುತ್ತಿದ್ದೇನೆ. ಹಸಿರು ಹೈಡ್ರೋಜನ್ ಕ್ಷೇತ್ರವನ್ನು ಎತ್ತರದ ಸಾಧನೆಯತ್ತ ಕೊಂಡೊಯ್ಯುವುದು ಅದರಲ್ಲಿ ಬಹಖಳ ಮಹತ್ತ್ವದ ಕಾರ್ಯಕ್ರಮ. ಅದಕ್ಕಾಗಿ ʼರಾಷ್ಟ್ರೀಯ ಹೈಡ್ರೋಜನ್ ಮಿಷನ್ʼ ಸ್ಥಾಪನೆಯ ಘೋಷಣೆ.

3.ಪ್ರಧಾನಿ ಗತಿಶಕ್ತಿ ಯೋಜನೆ
ರಾಷ್ಟ್ರದ ಅಭಿವೃದ್ಧಿಗೆ ಮೂಲಸೌಕರ್ಯ ಎನ್ನುವುದು ಬಹಳ ಮುಖ್ಯ. ಈ ಕ್ಷೇತ್ರವು ಬೆಳೆದಂತೆಲ್ಲ ದೇಶವೂ ಆರ್ಥಿಕವಾಗಿ ಶಕ್ತಿಶಾಲಿಯಾಗಿ ಮುನ್ನಡೆಯುತ್ತದೆ. ಹೀಗಾಗಿ ಪ್ರಧಾನಿ ಗತಿಶಕ್ತಿ ಯೋಜನೆ ಪ್ರಾರಂಭಿಸುತ್ತೇವೆ. 100 ಲಕ್ಷ ಕೋಟಿ ರೂ. ವೆಚ್ಚದ ಮಹಾನ್ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲ್ಯಾನ್ ಇದಾಗಿದೆ. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ಈ ಯೋಜನೆ ದೇಶದ ದಿಕ್ಕನ್ನೇ ಸಂಪೂರ್ಣವಾಗಿ ಬದಲಾವಣೆ ಮಾಡಲಿದೆ.

4.ಡಿಜಿಟಲ್ ಮತ್ತು ಇ–ಕಾಮರ್ಸ್
ಡಿಜಿಟಲ್ ವ್ಯಹಾರದಲ್ಲಿ ಭಾರತ ಜಗತ್ತಿನಲ್ಲಿಯೇ ಅತಿ ವೇಗವಾಗಿ ಬದಲಾಗುತ್ತಿರುವ ದೇಶ. ಈಗಾಗಲೇ ಭಾರತ ಬಹುದೂರ ಸಾಗಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಒಯ್ಯುವ ಉದ್ದೇಶದಿಂದ ಸರಕಾರವು ಇ–ಕಾಮರ್ಸ್ ಪ್ಲಾಟ್ಫಾರ್ಮ್ʼಗಳನ್ನು ಆರಂಭ ಮಾಡುತ್ತಿದೆ. ದೇಶದ ಗ್ರಾಮೀಣ ಭಾಗದ ಪ್ರತಿ ಮೂಲೆಯಲ್ಲಿರುವ ಕುಶಲ ಕರ್ಮಿಗಳಿಗೆ ಜಗತ್ತಿನ ಜತೆ ನೇರ ಸಂಪರ್ಕ ಕಲ್ಪಿಸಲು ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

  1. 2030ರ ವೇಳೆಗೆ ರೈಲ್ವೆಯಲ್ಲಿ ಮಾಲಿನ್ಯ ಶೂನ್ಯ
    ಮುಂಬರುವ 2030ರ ವೇಳೆಗೆಲ್ಲ ಭಾರತೀಯ ರೈಲ್ವೆ ಕ್ಷೇತ್ರದಲ್ಲಿ ಶೂನ್ಯ ಮಾಲಿನ್ಯ ಸ್ಥಿತಿ ನಿರ್ಮಾಣ ಮಾಡಲು ಪ್ರಧಾನಿ ಶಪಥ ಮಾಡಿದರು. ಹೊಗೆ ರಹಿತವಾದ, ಶುದ್ಧ, ಶುಚಿಯಾದ ರೈಲ್ವೆ ರೂಪುಗೊಳ್ಳಲಿದ್ದು ಜಗತ್ತಿನಲ್ಲಿಯೇ ಮಾದರಿ ರೈಲ್ವೆ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ.

6.75 ವಂದೇ ಭಾರತ್ ರೈಲುಗಳು
ರೈಲ್ವೆ ಮುಂದಿನ ಕಾಲು ಶತಮಾನದಲ್ಲಿ ಅಗಾಧವಾಗಿ ಬದಲಾಗಲಿದೆ ಎನ್ನುವುದರಲ್ಲಿ ಯಾವುದೇ ಬದಲಾವಣೆ ಇಲ್ಲ. ದೇಶದ 75ನೇ ಸ್ವಾತಂತ್ರೋತ್ಸವವನ್ನು ಮುಂದಿನ 75 ವಾರಗಳ ಕಾಲ ಆಚರಣೆ ಮಾಡಲಿದ್ದೇವೆ. 2021ರ ಮಾರ್ಚ್ 12ರಿಂದ 2023ರ ಅಗಸ್ಟ್ 15ರವರೆಗೂ ಸ್ವಾತಂತ್ರ್ಯ ದಿಆಚರಣೆಯ ಅಮೃತ ಮಹೋತ್ಸವ ಮುಂದುವರಿಯಲಿದೆ. ಇದರ ಭಾಗವಾಗಿ 75 ವಂದೇ ಭಾರತ್ ರೈಲುಗಳು ಮುಂದಿನ 75 ವಾರಗಳಲ್ಲಿ ಭಾರತದ ವಿವಿಧ ಸ್ಥಳಗಳನ್ನು ಜೋಡಣೆ ಮಾಡುತ್ತವೆ.

  1. ಸೈನಿಕ ಶಾಲೆಗಳಿಗೆ ಬಾಲಕಿಯರು
    ನಮ್ಮ ಸೇನೆ ಪ್ರಬಲವಾಗಬೇಕು. ಪ್ರಗತಿಯ ಜತೆಜತೆಗೇ ಸೇನಾ ಶಕ್ತಿಯೂ ವೃದ್ಧಿಸಲೇಬೇಕು. ಎರಡೂವರೆ ವರ್ಷಗಳ ಹಿಂದೆ ಮಿಜೊರಂ ರಾಜ್ಯದಲ್ಲಿ ಸೈನಿಕ ಶಾಲೆಗಳಿಗೆ ಬಾಲಕಿಯರಿಗೆ ಪ್ರವೇಶ ನೀಡಿದ ವಿಷಯವನ್ನು ನಾವೆಲ್ಲರೂ ಗಮನಿಸಬೇಕು. ಅದೊಂದು ಕ್ರಾಂತಿಕಾರಕ ಹೆಜ್ಜೆ. ನಾರಿ ಶಕ್ತಿಯ ಮೂಲಕವೂ ಸೇನೆಯನ್ನು ಶಕ್ತಿಶಾಲಿ ಮಾಡಬೇಕು, ಮಾಡೋಣ. ಇನ್ನು ಮುಂದೆ ದೇಶ ಎಲ್ಲಾ ಸೈನಿಕ ಶಾಲೆಗಳಲ್ಲೂ ಬಾಲಕಿಯರು ಮತ್ತು ಯುವತಿಯರಿಗೆ ಪ್ರವೇಶ ಅವಕಾಶ ಇರುತ್ತದೆ.
  2. ಪೌಷ್ಠಿಕ ಆಹಾರ
    ಭಾರತದ ಜನಸಂಖ್ಯೆ ಹೆಚ್ಚಾಗಿದೆ ನಿಜ, ಅದೇ ರೀತಿ ಆಹಾರದ ಬೇಡಿಕೆಯೂ ಇದೆ. ಅದಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ ಕ್ರಮಬದ್ಧವಾಗಿ ಹೆಚ್ಚಾಗಿ ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ಸಿಗುವಂತೆ ಆಗಬೇಕು. 2024ರ ವೇಳೆ ಎಲ್ಲ ಕಡೆಗಳಲ್ಲೂ ಅತ್ಯುತ್ತಮ ಗುಣಮಟ್ಟದ ಅಕ್ಕಿ ಸಿಗುವಂತೆ ಮಾಡಲಾಗುವುದು.

9.ದುರ್ಬಲರಿಗೆ ನೆರವಿನ ಹಸ್ತ
ಶಿಕ್ಷಣವೂ ಸೇರಿದಂತೆ ಎಲ್ಲ ರಂಗಗಳಲ್ಲು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರ ಸಹಾಯ ಹಸ್ತ ಚಾಚುತ್ತದೆ. ಈಗಾಗಲೇ ವೈದ್ಯ ಕೋರ್ಸುಗಳ ಪ್ರವೇಶಕ್ಕೆ ಬಡವರು, ಆರ್ಥಿಕ ದುರ್ಬಲರಿಗೆ ಮೀಸಲು ಘೋಷಣೆ ಮಾಡಲಾಗಿದೆ. ಎಲ್ಲ ಹಂತಗಳಲ್ಲೂ ಇಂಥ ಜನರನ್ನು ಮೇಲೆತ್ತುವ ಪ್ರಯತ್ನವನ್ನು ಸರಕಾರ ಬದ್ಧತೆಯಿಂದ ಮಾಡುತ್ತದೆ.

10.ಒಟ್ಟಿಗೆ ನಡೆಯೋಣ, ಒಟ್ಟಿಗೆ ಸಾಧಿಸೋಣ
ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಭಾರತದ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ನಾವೆಲ್ಲರೂ ಒಟ್ಟಿಗೆ ಸಾಗೋಣ ಮತ್ತು ಒಟ್ಟಿಗೇ ಶ್ರಮಿಸೋಣ. ಒಬ್ಬರಿಂದಲ್ಲ, ಎಲ್ಲರ ಪ್ರಯತ್ನದಿಂದ ಅದು ಸಾಕಾರವಾಗಲಿ. ಸಬ್ಕಾ ಸಾತ್ ಸಬ್ಕಾ ವಿಕಾಸ್, ಸಬ್ ಕಾ ವಿಶ್ವಾಸ್ ತತ್ತ್ವದಲ್ಲಿ ನಾವೆಲ್ಲ ನಂಬಿಕೆ ಇಟ್ಟು ನಡೆಯುತ್ತಿದ್ದೇವೆ. ಆದರೆ ಇವೆರಡೂ ಅಂಶಗಳ ಜತೆಗೆ ʼಸಬ್ಕಾ ಪ್ರಯಾಸ್ʼ ಎನ್ನುವುದು ಕೂಡ ಬಹಳ ಮುಖ್ಯ. ಈ ತತ್ತ್ವದಲ್ಲಿ ನಂಬಿಕೆ ಇಟ್ಟು ಎಲ್ಲರೂ ದೇಶ ಕಟ್ಟಲು ಕೆಲಸ ಮಾಡೋಣ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದರು.