ಯಾದಗಿರಿ: ಸಾರ್ವಜನಿಕರ ಹಣದಿಂದ ಕೈಗೊಳ್ಳುವ ಯಾವುದೇ ಯೋಜನೆಗಳಿಗೆ ಒಬ್ಬ ನಾಯಕರ ಹೆಸರು ಇಡುವುದು ಸೂಕ್ತವಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯಾದಗಿರಿಯಲ್ಲಿ 75ನೆಯ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಇಂದಿರಾ ಕ್ಯಾಂಟೇನ್ ಹೆಸರು ಬದಲಾವಣೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ದೇಶದಲ್ಲಿ ಅಟಲ ಬಿಹಾರಿ ವಾಜಿಪೇಯಿ ಅವರು ಸಾರ್ವಜನಿಕರ ದುಡ್ಡಿನಲ್ಲಿ ಕೈಗೊಳ್ಳುವ ಕೇಂದ್ರ ಸರಕಾರದ ಯೋಜನೆಗಳಿಗೆ ಒಬ್ಬ ನಾಯಕರ ಹೆಸರು ಇಡದೆ ಪ್ರಧಾನಮಂತ್ರಿ ಸಡಕ ಯೋಜನೆ ಎಂದು ನಾಮಕರಣ ಮಾಡುವ ಮೂಲಕ ಮಾದರಿಯಾಗಿದ್ದರು. ಅದೇ ಪದ್ದತಿಯನ್ನು ಪ್ರಸಕ್ತ ಪ್ರಧಾನ ಮಂತ್ರಿ ಮೋದಿಯವರು ಸಹ ಅಳವಡಿಸಿಕೊಂಡು ಯಾವ ನಾಯಕನ ಹೆಸರು ಇಡದೆ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಎಂಬ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಸಾರ್ವಜನಿಕರ ಹಣದಲ್ಲಿ ರೂಪಿಸುವ ಯೋಜನೆಗಳಿಗೆ ಹೆಸರು ಇಡಲು ಮಾನದಂಡ ರೂಪಿಸಿದ್ದು ಅದನ್ನು ಎಲ್ಲರೂ ಅನುಸರಿಸಬೇಕು ಎಂದರು.
ಈ ದೇಶದ ಸ್ವಾತಂತ್ರಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಆದರೆ ನೆಹರು ಮನೆತನದವರು ಮಾತ್ರ ಸ್ವಾತಂತ್ರಕ್ಕಾಗಿ ದುಡಿದಿದ್ದಾರೆ ಎಂದು ಅವರ ಹೆಸರು ಇಡುವುದು ಸರಿಯಲ್ಲ. ಇದನ್ನು ರಾಜಕೀಯಗೊಳಿಸಬಾರದು ಎಂದು ಅವರು ಹೇಳಿದರು.
23ಕ್ಕೆ ಶಾಲೆಗಳು ಪ್ರಾರಂಭ: ಈಗಾಗಲೇ ಮುಖ್ಯಮಂತ್ರಿಗಳು ಆ. 23 ರಿಂದ 8.9,10,11 ಮತ್ತು 12 ನೆಯರ ತರಗತಿಗಳನ್ನು ಪ್ರಾರಂಭಿಸಲು ತಿರ್ಮಾನ ತೆಗೆದುಕೊಂಡಿದ್ದಾರೆ. ಯಾವ ಜಿಲ್ಲೆಯಲ್ಲಿ ಶೇ. 2ಕ್ಕಿಂತ ಕಡಿಮೆ ಪ್ರಮಾಣದ ಕೊರೊನಾ ಇದೆಯೂ ಆ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ಶೇ. 2ಕ್ಕಿಂತ ಕಡಿಮೆ ಇದ್ದು ಬಹುತೇಕ ಶೇ. 100 ರಷ್ಟು ಶಿಕ್ಷಣ ಇಲಾಖೆಯಲ್ಲಿ ಲಸಿಕೆ ಹಾಕಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ಸರಕಾರ ಹೆಚ್ಚಿನ ಕಾಳಜಿ ವಹಿಸಲಿದ್ದು ಆ ಬಗ್ಗೆ ಪಾಲಕರಲ್ಲಿ ಯಾವುದೇ ಅತಂಕ ಬೇಡ ಎಂದು ಹೇಳಿದರು.
ಈಗಾಗಲೆ ರಾಜ್ಯ ಸರಕಾರ ಶಿಕ್ಷಕರ ವರ್ಗಾವಣೆ ಪ್ರಕ್ರೀಯ ಪಾರಂಭಿಸಿದ್ದು, ಇನ್ನು ಒಂದೆರಡು ವಾರದಲ್ಲಿ ಅಧಿಸೂಚನೆ ಹೊರಬೀಲಿದೆ ಎಂದು ಸಚಿವರು ತಿಳಿಸಿದರು.