ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಯುವಕ

ಹಾಸನ: ಕಾವೇರಿ ನದಿಯಲ್ಲಿ ನೀರು ಪಾಲಾಗುತ್ತಿದ್ದ ಇಬ್ಬರನ್ನು ಯುವಕನೊಬ್ಬ ರಕ್ಷಿಸಿದ ಘಟನೆ ನಡೆದಿದೆ.

ಚಿಕ್ಕ ಅರಕಲಗೂಡಿನ ವೃದ್ಧ ದಾಸೇಗೌಡರು (94) ಮತ್ತು ನವೀನ್ ರಕ್ಷಿಸಲ್ಪಟ್ಟವರಾಗಿದ್ದಾರೆ.

ಕೊಣನೂರಿನ ಕಾವೇರಿ ನದಿಗೆ ಬಿದ್ದು ಮುಳುಗುತ್ತಿದ್ದ ದಾಸೇಗೌಡರನ್ನು ನೋಡಿದ ಹಾಸನದ ನವೀನ್ ಎಂಬ ಯುವಕ ವೃದ್ಧರನ್ನು ರಕ್ಷಿಸಲು ಹೊಳೆಗೆ ಹಾರಿದರು. ಆದರೆ ಆತ ಸಹ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು. ಇದನ್ನು ಕಂಡು ನದಿ ಬಳಿ ಇದ್ದ ಸಾರ್ವಜನಿಕರು ಕೂಗಿಕೊಂಡರು.

ಈ ವೇಳೆ ಮೈಸೂರಿನ ಗಿರಿಮಂಜು ಎಂಬುವರು ತೂಗುಸೇತುವೆ ವೀಕ್ಷಿಸುತ್ತಾ ಛಾಯಾಗ್ರಹಣ ಮಾಡುತ್ತಿದ್ದರು. ದಾಸೇಗೌಡರು ಮತ್ತು ನವೀನ್ ನೀರುಪಾಲಾಗುತ್ತಿದ್ದುದನ್ನು ನೋಡಿ ಪ್ರಾಣದ ಹಂಗು ತೊರೆದು ನೀರಿಗೆ ಧುಮುಕಿ ಇವರಿಬ್ಬರನ್ನು ರಕ್ಷಿಸಿದ್ದಾರೆ.