ಹುಬ್ಬಳ್ಳಿ: ಪೆಗಾಸಿಸ್ ಖರೀದಿ ಮಾಡಿಲ್ಲ ಎಂದು ಸ್ಪಷ್ಟವಾಗಿ ಸರ್ಕಾರ ಉತ್ತರ ನೀಡಿದೆ ಎಂದು ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಜನಾರ್ಶೀವಾದ ಯಾತ್ರೆಯ ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಂಸತ್ತಿನ ಅಧಿವೇಶನ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರೀತಿಯ ಚರ್ಚೆಗೆ ನಾವು ಸಿದ್ಧ ಎಂದು ಹೇಳಿದ್ದಾರೆ. ಆದರೆ ಪ್ರತಿಪಕ್ಷಗಳು ಪೆಗಾಸಿಸ್ ಮುಂದಿಟ್ಟುಕೊಂಡು ವಿನಾಕಾರಣ ಗಲಾಟೆ ಎಬ್ಬಿಸಿ ಸಂಸತ್ತಿನ ಅಮೂಲ್ಯ ಸಮಯ ಹಾಳು ಮಾಡುತ್ತಿವೆ ಎಂದರು.
ಯುಪಿಎ ಅವಧಿಯಲ್ಲಿ ಬಿಜೆಪಿ ಸಂಸತ್ತಿನಲ್ಲಿ ಜನತೆಯ ಪರವಾಗಿ ಹೋರಾಡಿತ್ತು. ಅಂದಿನ ಯುಪಿಎ ಸರ್ಕಾರ ಮಾಡಿದ 2ಜಿ ಹಗಣರಣ, ಕಲ್ಲಿದ್ದಲು ಹಗರಣಗಳ ಬಗ್ಗೆ ಪ್ರಶ್ನೆ ಮಾಡಿ ಹೋರಾಟ ನಡೆಸಿತ್ತು. ಆದರೆ ಈಗ ವಿಪಕ್ಷ ಕಾಂಗ್ರೆಸ್ ಪಕ್ಷ ಹಾಗೂ ಮಿತ್ರ ಪಕ್ಷಗಳು ಪೆಗಾಸಿಸ್ ಕುರಿತು ಚರ್ಚೆಗೂ ಬಾರದೆ, ಗಲಾಟೆ ಎಬ್ಬಿಸಿ ಸಮಯ ಹಾಳು ಮಾಡಿವೆ ಎಂದರು.
ಪೆಗಾಸಿಸ್ ವಿಚಾರ ಮುಂದಿಟ್ಟಕೊಂಡು ಸಂಸತ್ತಿನಲ್ಲಿ ವಿಪಕ್ಷ ಕಾಂಗ್ರೆಸ್ ಗದ್ದ ಎಬ್ಬಿಸುತ್ತಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂದ ರಾಜೀವ ಚಂದ್ರಶೇಖರ್ ಅವರು, ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಉತ್ತರ ಖಂಡ ಚುನಾವಣೆಯಲ್ಲಿ ಲಾಭ ಆಗುತ್ತೆ ಎಂದು ಕಾಂಗ್ರೆಸ್ ಲೆಕ್ಕಹಾಕಿದೆ ಎಂದು ಹೇಳಿದರು.
ಮತದಾರರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮತದಾನ ಸಮಯ ಬಂದಾಗ ತಕ್ಕ ಉತ್ತರವನ್ನು ವಿಪಕ್ಷಗಳಿಗೆ ನೀಡುತ್ತಾರೆಂದು ತಿಳಿಸಿದರು.