ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹತೋಟಿ ಮೀರಿದೆ; ಭಾರತೀಯರ ರಕ್ಷಣೆಗೆ ಸರ್ಕಾರ ಪ್ರಯತ್ನ ನಡೆಸಿದೆ – ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಪ್ರಯತ್ನಗಳನ್ನು ನಡೆಸಿದೆ
ಎಂದು ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಅಫ್ಘಾನಿಸ್ತಾನದಲ್ಲಿ ಏರ್ ಸ್ಪೇಸ್ ನ್ನು ಬಂದ್ ಮಾಡಲಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತೀಯರನ್ನು ದೇಶಕ್ಕೆ ಕರೆತರುವ ಪ್ರಯತ್ನಗಳನ್ನು ನಮ್ಮ ಸರ್ಕಾರ ಮುಂದುವರಿಸಿದೆ ಎಂದರು.

ಅಫ್ಘಾನಿಸ್ತಾನದಲ್ಲಿರುವ ಭಾರತದ ಪ್ರತಿಯೊಬ್ಬ ಪ್ರಜೆಯ ಬಗ್ಗೆಯೂ ನಮ್ಮ ಸರ್ಕಾರಕ್ಕೆ ಕಾಳಜಿ ಇದೆ. ಮೋದಿ ನೇತೃತ್ವದ ಭಾರತ ಸರ್ಕಾರ ಎಲ್ಲ ಸಮಸ್ಯೆಗಳನ್ನು ನಿಭಾಯಿಸಲು ಶಕ್ತಿಯುತವಾಗಿದೆ ಎಂದವರು ತಿಳಿಸಿದರು.

ಗಡಿಯಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿರುವುದನ್ನು ಬಿಟ್ಟರೆ ದೇಶದ ಒಳಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದ ಅವರು ಕಳೆದ 7 ವರ್ಷಗಳಲ್ಲಿ ದೇಶದ ಒಳಗಡೆ ಒಂದೇ ಒಂದು ಉಗ್ರ ಚಟುವಟಿಕೆ ನಡೆಸಲು ಬಿಟ್ಟಿಲ್ಲವೆಂದರು.

ಉಗ್ರಗಾಮಿಗಳ ವಿಷಯದಲ್ಲಿ ಝೀರೋ ಟಾಲರೆನ್ಸ್ ಘೋಷಣೆ ನಮ್ಮದಾಗಿದೆ. ಅದಕ್ಕೆ ತಕ್ಕಂತೆ ಸೂಕ್ತ ಬಿಸಿ ಮುಟ್ಟಿಸಲು ನಮ್ಮ ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದವರು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹತೋಟಿ ಮೀರಿದೆ. ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ. ಸದ್ಯ ಅಲ್ಲಿನ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.