ಬೆಂಗಳೂರು: ಮುಂದಿನ ಸೆ. 13ರಿಂದ 24ರ ವರೆಗೆ ಹತ್ತು ದಿನಗಳ ವಿಧಾನ ಮಂಡಲ ಅಧಿವೇಶನ ನಡೆಸಲು ಸರಕಾರ ನಿರ್ಧರಿಸಿದೆ.
ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಗ್ಗೆ ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದ ಮೇಲೆ ನಡೆಯಲಿರುವ ಮೊದಲ ಅಧಿವೇಶನ ಇದಾಗಿದ್ದು, ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡುವ ನಿರೀಕ್ಷೆ ಇದೆ.
ಈ ಬಗ್ಗೆ ತಡವಾಗಿ ಮಾಹಿತಿ ನೀಡಲಾಗುವುದು ಎಂದು ಸಚಿವರು ಹೇಳಿದರು.
ಅಮೃತ ಯೋಜನೆಗಳಿಗೆ ಅನುದಾನ
ಸ್ವಾತಂತ್ರ್ಯ ದಿನಾಚರಣೆಯ ಆಜಾದಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಅವರು ಘೋಷಣೆ ಮಾಡಿದ ಕೆಲ ಅಮೃತ ಯೋಜನೆಗಳಿಗೆ ಅನುದಾನ ಕೊಡಲು ಸಂಪುಟ ನಿರ್ಧಾರ ಕೈಗೊಂಡಿದೆ.
ಅಮೃತ ನಿರ್ಮಲ ಯೋಜನೆ
ರಾಜ್ಯದ ಆಯ್ದ ನಗರಸಭೆ, ಪಟ್ಟಣ ಪಂಚಾಯತಿ ಸೇರಿದಂತೆ ಒಟ್ಟು 75 ಸ್ಥಳೀಯ ಸಂಸ್ಥೆಗಳ ಸ್ವಚತೆ ಕಾಪಾಡುವ ನಿಟ್ಟಿನಲ್ಲಿ ತಲಾ 75 ಕೋಟಿ ರೂ.ಬಿಡುಗಡೆ ಮಾಡಲಾಗುವುದು.
ಅಮೃತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆ
ಈ ಯೋಜನೆ ಮೂಲಕ ರಾಜ್ಯದ 759 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ಇರುವ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶಕ್ಕೆ 150 ಕೋಟಿ ರು. ಅನುದಾನ ನೀಡಲಾಗುವುದು.
ಅಮೃತ ಉತ್ಪಾದಕ ಸಂಸ್ಥೆ ಯೋಜನೆ
ರೈತರ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅನುಕೂಲ ಆಗುವಂತೆ 750 ರೈತ ಉತ್ಪಾದಕ ಸಂಘಗಳ ಸ್ಥಾಪನೆ ಮಾಡುವುದಕ್ಕಾಗಿ 225 ಕೋಟಿ ರು. ಅನುದಾನ
ಅಮೃತ ಶಾಲಾ ಸೌಲಭ್ಯ ಯೋಜನೆ
ರಾಜ್ಯದ 750 ಸರಕಾರಿ ಶಾಲೆಗಳಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸಲು ಪ್ರತಿ ಶಾಲೆಗೆ ತಲಾ 1 ಲಕ್ಷ ರೂಪಾಯಿ ಅನುದಾನದಂತೆ ಒಟ್ಟು 75 ಕೋಟಿ ರೂಪಾಯಿ ಒದಗಿಸಲಾಗುವುದು.
ಅಮೃತ ಸ್ವಯಂ ಉದ್ಯಮ ಯೋಜನೆ
ರಾಜ್ಯದಲ್ಲಿರುವ 7500 ಸ್ವ ಸಹಾಯ ಸಂಸ್ಥೆಗಳಿಗೆ ಉತ್ತೇಜನ ನೀಡಿ ಅವುಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ 1 ಲಕ್ಷ ರೂಪಾಯಿ ಸೀಡ್ ಮನಿ ನೀಡಲಾಗುವುದು. ಇದಕ್ಕೆ ಒಟ್ಟು 75 ಕೋಟಿ ರೂಪಾಯಿ ಅನುದಾನ ನೀಡಲಾಗುವುದು.
ಅಮೃತ ಗ್ರಾಮ ಪಂಚಾಯತಿ ಯೋಜನೆ
ರಾಜ್ಯದ 750 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಒದಗಿಸಲು ಪ್ರತಿ ಗ್ರಾಮ ಪಂಚಾಯತಿಗೆ ತಲಾ 25 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು.