ದೊಡ್ಡಬಳ್ಳಾಪುರ: ಕೋವಿಡ್ ಸಮಯದಲ್ಲಿ ಬೆಡ್, ಚಿಕಿತ್ಸೆ, ಔಷಧಿ, ಆಕ್ಸಿಜನ್, ಲಸಿಕೆ ನೀಡದೆ ಜನ ಸಾಯುವಂತೆ ಮಾಡಿ ಅವರಿಗೆ ಬೂದಿ ಕೊಟ್ಟಿರುವ ಬಿಜೆಪಿ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಬೇಕಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದಲ್ಲಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈಗ ಬಿಜೆಪಿಯವರು ಜನಾಶೀರ್ವಾದ ಅಂತಾ ಮಾಡುತ್ತಿದ್ದಾರೆ. ನೀವು ಬೂದಿ ಕೊಟ್ಟಿದ್ದಕ್ಕೆ ಜನ ನಿಮಗೆ ಆಶೀರ್ವಾದ ಮಾಡುತ್ತಾರಾ? ಎಂದರು ಡಿಕೆಶಿ.
ನಮಗೆ ರಾಜಕೀಯ ಸಭೆ ಮಾಡಬೇಡಿ ಎನ್ನುವ ಬಿಜೆಪಿ, ಜನಾಶೀರ್ವಾದ ಮಾಡಬಹುದಾ? ನಾಳೆ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನ. ನಾವು ಕಾರ್ಯಕ್ರಮವನ್ನು ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಡಲು ಹೊರಟಿದ್ದೆವು. ಅದಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಕಛೇರಿಯಲ್ಲೇ ಕಾರ್ಯಕ್ರಮ ಮಾಡುತ್ತಿದ್ದೇವೆಂದರು.
ಬಿಜೆಪಿಯವರು ತಮ್ಮ ಸ್ವಂತ ಕೆಲಸಕ್ಕೆ ಸರಕಾರವನ್ನು ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ನಮ್ಮ ಶಾಸಕರು ವೆಂಕಟರಮಣಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವು ನಮ್ಮ ಕೈ ಬಲಪಡಿಸಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಸರ್ಕಾರದ ಹಣ ನಮ್ಮ ಜನರ ಹಣ. ಅದು ಜನರಿಗೆ ಸಿಗುವಂತೆ ಮಾಡಬೇಕು. ಗುಜರಾತ್ ನಲ್ಲಿ ಮೃತರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ರಾಜ್ಯದಲ್ಲಿ 3 ಲಕ್ಷ ಜನ ಸತ್ತಿದ್ದಾರೆ ಎಂದು ಸರ್ಕಾರ ವೆಬ್ ಸೈಟ್ ನಲ್ಲಿ ಹಾಕಿತ್ತು. ಈ ಬಗ್ಗೆ ಡೆತ್ ಆಡಿಟ್ ನಡೆಯಬೇಕು ಎಂದು ಈ ಮೂಲಕ ನಮ್ಮ ನಾಯಕರಿಗೆ ನಾನು ಹೇಳುತ್ತೇನೆಂದರು.
ದೆಹಲಿಯಲ್ಲಿ ಆರೋಗ್ಯ ಸಚಿವರನ್ನು, ಇಲ್ಲಿ ಮುಖ್ಯಮಂತ್ರಿ ಬದಲಾವಣೆಯೇ ಬಿಜೆಪಿಯಿಂದ ಜನ ಮೆಚ್ಚುವ ಆಡಳಿತ ಸಿಕ್ಕಿಲ್ಲ ಎಂಬುದಕ್ಕೆ ಸಾಕ್ಷಿ ಎಂದು ಡಿಕೆಶಿ ಹೇಳಿದರು.
ಇಡೀ ದೇಶದಲ್ಲಿ ಉದ್ಯೋಗ, ಆಸ್ತಿ ಕಳೆದುಕೊಂಡವರು ಬಹಳಷ್ಟು ಜನರಿದ್ದಾರೆ. ಯಾರಿಗೂ ಸರ್ಕಾರ ತೆರಿಗೆ ಕಡಿಮೆ ಮಾಡಿಲ್ಲ. ಸಣ್ಣ ಪರಿಹಾರವನ್ನೂ ನೀಡಲಿಲ್ಲ. ಅವರಿಗೆ ಕೊಟ್ಟಿದ್ದು ಕೇವಲ ಬೂದಿ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.