ಪುಣೆ: ಗುರುವಿನ ಮನೆಗೆ ಶಿಷ್ಯ ಬಂದು ಗುರು ವಂದನೆ ಸಲ್ಲಿಸಿದ್ದಾರೆ.
ಟೊಕಿಯೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದ ನಮ್ಮ ಹೆಮ್ಮೆಯ ಯೋಧ ನೀರಜ್ ಚೋಪ್ರ ಅವರು, ತಮ್ಮ ಮೊದಲ ಗುರು ಕಾಶೀನಾಥ್ ಅವರನ್ನು ಅರಸಿ ಬಂದಿದ್ದಾರೆ.
ಪುಣೆಯಲ್ಲಿನ ಗುರು ಕಾಶೀನಾಥ್ ಅವರ ನಿವಾಸಕ್ಕೆ ಬಂದ ನೀರಜ್ ಬಹಳ ಹೊತ್ತು ಗುರು ಮನೆಯಲ್ಲಿದ್ದರಲ್ಲದೆ, ಕುಟುಂಬ ಸದಸ್ಯರ ಜತೆ ಕಾಲ ಕಳೆದಿದ್ದಾರೆ.
ನೀರಜ್ ಬಂಗಾರ ಪದಕ ಗೆಲ್ಲುತ್ತಿದ್ದಂತೆ ಕೋಚ್ ಕಾಶಿನಾಥರನ್ನು ಮಾಧ್ಯಮಗಳು ಪತ್ತೆ ಹಚ್ಚಿದ್ದವು. ತಮ್ಮ ಪಾಡಿಗೆ ತಾವಿದ್ದ ಕಾಶಿನಾಥರು ಮಾಧ್ಯಮಗಳಿಂದ ದೂರವೇ ಇದ್ದರು. ಆದರೆ, ಶಿಷ್ಯ ನೀರಜ್ ಮಾತ್ರ ಗುರುವನ್ನು ಮರೆಯದೇ ಹುಡುಕಿಕೊಂಡು ಬಂದು ಗುರು ನಮನ ಸಲ್ಲಿಸಿದ್ದಾರೆ.
ಕಾಶೀನಾಥ್ ಅವರು ನೀರಜ್ ಗುರುವಲ್ಲ, ಚಿನ್ನದ ಹುಡುಗನಿಗೆ ಅವರು ಕೋಚಿಂಗ್ ಕೊಟ್ಟಿಲ್ಲ ಎಂದು ಕೆಲಮಂದಿ ಸುದ್ದಿ ಹಬ್ಬಿಸಿದ್ದರು.
ಕಾಶೀನಾಥ್ ವಿರುದ್ಧ ಅಪಪ್ರಚಾರ ನಡೆಸಿದ್ದವರಿಗೆ ಸ್ವತಃ ನೀರಜ್ ಉತ್ತರ ಕೊಟ್ಟಿದ್ದಾರೆ. ಅಲ್ಲದೆ, ಕರ್ನಾಟಕ ಸರಕಾರವು ಕಾಶೀನಾಥ್ ಅವರಿಗೆ ಹತ್ತು ಲಕ್ಷ ಬಹುಮಾನ ಘೋಷಣೆ ಮಾಡಿದ್ದನ್ನೂ ಕೆಲವರು ಟೀಕಿಸಿದ್ದರು.
ಕಾಶಿನಾಥ್ ಅವರು ನೀರಜ್ ಕೋಚ್ ಅಲ್ಲ ಎಂದು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ನೀಡಿದ್ದ ಹೇಳಿಕೆ ಟೀಕೆಗೆ ಗುರಿಯಾಗಿತ್ತು.
ಇದೀಗ ನೀರಜ್ ಕಾಶೀನಾಥ್ ಅವರ ಮನೆಗೆ ಬರುವ ಮೂಲಕ ಎಲ್ಲ ಟೀಕಾಕಾರ ಬಾಯಿ ಮುಚ್ಚಿಸಿದ್ದಾರೆ.
ಕೋಚ್ ಕಾಶೀನಾಥ್ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದವರು.