ಬಂಡೀಪುರ ಸಿಎಫ್‍ಒ ವಿರುದ್ಧ ಆದಿವಾಸಿಗಳ ಆಕ್ರೋಶ -ಸಚಿವರ ಮುಂದೆಯೇ ಮಹಿಳೆಯರಿಂದ ತರಾಟೆ..!

ಚಾಮರಾಜನಗರ: ಅರಣ್ಯ ಸಚಿವ ಉಮೇಶ್ ಕತ್ತಿ ಗಿರಿಜನ ಹಾಡಿ ಭೇಟಿ ವೇಳೆ ಆದಿವಾಸಿ ಮಹಿಳೆಯರು ಬಂಡೀಪುರ ಸಿಎಫ್‍ಒ ವಿರುದ್ಧ ಆಕ್ರೋಶ ಹೊರಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಗಿರಿಜನ ಕಾಲೋನಿಯಲ್ಲಿ ನಡೆದಿದೆ.

ಅರಣ್ಯ ಸಚಿವರೊಂದಿಗೆ ಅಳಲು ತೋಡಿಕೊಂಡ ಆದಿವಾಸಿ ಮಹಿಳೆಯರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 205 ದಿನಗೂಲಿ ನೌಕರರನ್ನು ಸಿಎಫ್‍ಒ ನಟೇಶ್ ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿದ್ದು ನೌಕರಿ ಬಿಡಲಾಗದೇ ಅಲ್ಲಿ ಕರ್ತವ್ಯ ನಿರ್ವಹಿಸಲಾಗದ ಇಕ್ಕಟ್ಟಿಗೆ ಸಿಲುಕಿದ್ದೇವೆ ಎಂದು ಕಿಡಿಕಾರಿದರು.

ನಟೇಶ್ ಅವರನ್ನು ಸುತ್ತುವರಿದ ಮಹಿಳೆಯರು ಆದಿವಾಸಿಗಳಿದ್ದರೇ ಕಾಡು ಉಳಿಯುವುದು ಎಂಬುದನ್ನು ಮರೆಯಬೇಡಿ, 12 ಸಾವಿರ ರೂ. ವೇತನ ಕೊಟ್ಟು 60-70 ಕಿಮೀ ದೂರದೂರಿಗೆ ವರ್ಗಾವಣೆ ಮಾಡಿದರೇ ಜೀವನ ಮಾಡುವುದು ಹೇಗೆ, ನೌಕರರು ಮನೆ ಸಂಭಾಳಿಸುವುದು ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.

ಸಚಿವರೊಟ್ಟಿಗೂ ವಾಗ್ದಾದ ನಡೆಸಿದ ಮಹಿಳೆಯರು, ನಾವಿದ್ದರಿಂದಲೇ ಕಾಡು ಉಳಿದಿದೆ, ನಮ್ಮನ್ನು ದೂರ ತಳ್ಳಿದರೇ ಅರಣ್ಯ ಉಳಿಯಲು ಸಾಧ್ಯವೇ, ಗಿರಿಜನರಿಗೆ ಮಾನಸಿಕ ಹಿಂಸೆ ಕೊಡಬೇಕೆಂದೇ ನಟೇಶ್ ಅವರು ದಿನಗೂಲಿ ನೌಕರರನ್ನು 50-60 ಕಿಮೀ ದೂರದೂರುಗಳಿಗೆ ವರ್ಗಾವಣೆ ಮಾಡಿದ್ದಾರೆ, ಒಂದು ರೇಂಜಿನಲ್ಲೇ ವರ್ಗಾವಣೆ ಮಾಡಬಹುದಿತ್ತು ಆದರೆ ವಿಭಾಗದಿಂದ ವಿಭಾಗಕ್ಕೆ ವರ್ಗಾಯಿಸಿರುವುದು ಸರಿಯಲ್ಲ, ಈ ಕುರಿತು ಕ್ರಮ ಕೈಗೊಳ್ಳಿ ಎಂದು ಸಚಿವರಿಗೆ ಒತ್ತಾಯಿಸಿದರು.

ಮಧ್ಯಾಹ್ನ ಅಧಿಕಾರಿಗಳ ಜೊತೆ ಸಭೆ ಕರೆದಿದ್ದು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಕಳೆದ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 205 ಮಂದಿ ದಿನಗೂಲಿ ನೌಕರರನ್ನು ಸಿಎಫ್‍ಒ ನಟೇಶ್ ವರ್ಗಾವಣೆ ಮಾಡಿದ್ದಾರೆ. ಈ ಸಂಬಂಧ, ದಿನಗೂಲಿ ನೌಕರರಷ್ಟೇ ಅಲ್ಲದೇ ಕೆಲ ಪರಿಸರ ಹೋರಾಟಗಾರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.