ಲಿಂಗಾಯತರಿಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ -ಸಚಿವ ಉಮೇಶ್ ಕತ್ತಿ

ಚಾಮರಾಜನಗರ: ಲಿಂಗಾಯತರಿಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ ಎಂದು ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಸಚಿವ ಉಮೇಶ್ ಕತ್ತಿ ಅವರು ಬಂಡೀಪುರದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದರು.

ಲಿಂಗಾಯತರಿಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ಆದರೂ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅಧಿಕಾರ ಕೊಟ್ಟಿದೆ ಎಂದರು.

ಮೀಸಲಾತಿ ವಿಚಾರದಲ್ಲಿ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ ಅವರು,ವಿಪಕ್ಷದ ನಾಯಕರು ವಿರೋಧವಾಗಿಯೇ ಮಾತನಾಡುತ್ತಾರೆ ಎಂದರು.

ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬ ಸಿದ್ದರಾಮಯ್ಯ ಟ್ವೀಟ್ಗೆ ಪ್ರತಿಕ್ರಿಯಿಸಿ, ಅವರು ವಿರೋಧ ಪಕ್ಷದ ನಾಯಕರು. ಆದ್ದರಿಂದ ವಿರೋಧವಾಗಿ ಮಾತನಾಡುತ್ತಾರೆ. ಅವರೆಲ್ಲ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ತಿರುಗೇಟು ಕೊಟ್ಟರು.

ನಾಳೆ ಬಿಳಿಗಿರಿ ರಂಗನ ಬೆಟ್ಟದ ಹಾಡಿಗಳಿಗೆ ಭೇಟಿ
ಇವತ್ತು ಬಂಡೀಪುರ ಸುತ್ತಮುತ್ತಲಿನ ಹಾಡಿಗಳಿಗೆ ಭೇಟಿ ಕೊಟ್ಟು ಸಮರ್ಪಕವಾಗಿ ಆಹಾರ ವಿತರಣೆ ಆಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದ್ದೇವೆ. ನಾಳೆ ಬಿಳಿಗಿರಿ ರಂಗನ ಬೆಟ್ಟದ ಹಾಡಿಗಳಿಗೆ ಭೇಟಿ ಕೊಟ್ಟು ಶಾಲಾ ಮಕ್ಕಳಿಗೆ ಆಹಾರ ವಿತರಣೆ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದರು.

ಅಧಿಕಾರಿಗೆ ಸಸ್ಪೆಂಡ್ ಎಚ್ಚರಿಕೆ
ಮೇಲುಕಾಮನಹಳ್ಳಿ ಗಿರಿಜನ ಕಾಲೋನಿ ಭೇಟಿ ವೇಳೆ, ಸಮಾಜ ಕಲ್ಯಾಣ ಇಲಾಖೆಯಿಂದ ಶೌಚಾಲಯಗಳ ಅಪೂರ್ಣ ಕಾಮಗಾರಿ ಮಾಹಿತಿ ಪಡೆದ ಸಚಿವರು ಅಧಿಕಾರಿಗಳ ವಿರುದ್ಧ ಗರಂ ಆದರು.

ಅಧಿಕಾರಿಗಳು ಹೀಗಾದರೇ ಹೇಗೆ, ಕೆಲಸ ಮಾಡುವುದಾರೆ ಮಾಡಿ ಇಲ್ಲವೆಂದರೆ ಸಸ್ಪೆಂಡ್ ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.

ಶೀಘ್ರವೇ ಸಮಸ್ಯೆಗೆ ಪರಿಹಾರ
ಇದೇ ವೇಳೆ, ಬೆಟ್ಟ ಕುರುಬ ಎಂದು ನಮೂದಿಸಲು ಕಾಡು ಕುರುಬ ಎಂದು ಕೊಡುತ್ತಿದ್ದಾರೆಂದು ಮಹಿಳೆಯರು ಅಳಲು ತೋಡಿಕೊಂಡಿದ್ದಕ್ಕೆ ಶೀಘ್ರವೇ ಪತ್ರ ವ್ಯವಹಾರ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುತ್ತೇವೆ ಎಂದರು.

ಮನಸ್ಸಿಗೆ ನೆಮ್ಮದಿ ಪಡೆಯಬೇಕೆನ್ನುವವರು ಬಂಡೀಪುರ ಸಫಾರಿಗೆ ಬನ್ನಿ ಎಂದು ಪ್ರವಾಸಿಗರಿಗೆ ಸಚಿವ ರಮೇಶ್ ಕತ್ತಿ ಕರೆ ಕೊಟ್ಟರು.