ಮೈಸೂರು ಗ್ಯಾಂಗ್ ರೇಪ್ ಕೇಸ್: ಒಬ್ಬ ಬಾಲಾಪರಾಧಿ ಸೇರಿ ಐವರ ಬಂಧನ, ಮತ್ತೊಬ್ಬ ಪರಾರಿ

ಕುಕೃತ್ಯ ನಡೆದ 85 ಗಂಟೆಯಲ್ಲಿ ಕೀಚಕರು ಬಲೆಗೆ; ರೇಪ್ ಮಾಡಿದವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲ
ಮೈಸೂರು: ಇಡೀ ರಾಜ್ಯವನ್ನು ದಿಗ್ಭ್ರಮೆಗೊಳಿಸಿದ್ದ ಮೈಸೂರು ಗ್ಯಾಂಗ್ ರೇಪ್ ಪ್ರಕರಣವನ್ನು 85 ಗಂಟೆಗಳಲ್ಲಿ ಪೊಲೀಸರು ಬೇಧಿಸಿ ಐವರು ಕೀಚಕರನ್ನು ಬಂಧಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಮೈಸೂರಿನ ಎಸ್ಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಆರೋಪಿಗಳು ತಮಿಳುನಾಡು ರಾಜ್ಯದ ತಿರುಪೂರ್ ನಿವಾಸಿಗಳು.

ಬಂಧಿತ ಐವರು ಆರೋಪಿಗಳಲ್ಲಿ ಒಬ್ಬ ಬಾಲ ಆರೋಪಿ ಆಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ. ಒಟ್ಟು ಆರು ಆರೋಪಿಗಳು ಈ ಕುಕೃತ್ಯ ಎಸಗಿದ್ದಾರೆ.

ಪಾತಕಿಗಳು ಡ್ರೈವಿಂಗ್, ಬಡಿಗೆ, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಇವರಲ್ಲಿ ಒಬ್ಬ 7ನೇ ತರಗತಿ, ಇನ್ನೊಬ್ಬ 8ನೇ ತರಗತಿ ಹಾಗೂ ಓದಿಯೇ ಇಲ್ಲ. ಇವರಲ್ಲಿ ಒಬ್ಬನಿಗೆ 17 ವರ್ಷ ವಯಸ್ಸಿದ್ದು, ಅವನನ್ನು ಬಾಲಾಪರಾಧಿ ಎಂದು ಗುರುತಿಸಲಾಗಿದೆ. ಆದರೆ, ನಿರ್ಭಯಾ ಪ್ರಕರಣದ ನಂತರ ಕಾನೂನು ಬದಲಾಗಿದ್ದು, ಈ ಬಾಲಾಪರಾಧಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲ
ಕೆಲ ಸುದ್ದಿ ವಾಹಿನಿಗಳು ಅತ್ಯಾಚಾರ ಎಸಗಿದ ಆರೋಪಿಗಳು ಎಂಜಿನೀಯರಿಂಗ್ ವಿದ್ಯಾರ್ಥಿಗಳು. ಸೆಮಿಸ್ಟರ್ ಪರೀಕ್ಷೆ ಬರೆಯಲು ಮೈಸೂರಿಗೆ ಬಂದಿದ್ದಾಗ ಅವರು ಈ ಕೃತ್ಯ ಎಸಗಿದ್ದರು. ಇದಾದ ಬಳಿಕ ಪರೀಕ್ಷೆ ಬರೆಯದೇ ಎಸ್ಕೇಪ್ ಆಗಿದ್ದರು. ಇವರನ್ನು ಪೊಲೀಸರು ಬೆನ್ನಟ್ಟಿ ಹಿಡಿದ್ದಾರೆಂದು ವಾಹಿನಿಗಳಲ್ಲಿ ವರದಿಯಾಗುತ್ತಿತ್ತು. ಅದನ್ನು ನೋಡಿ ನಮಗೂ ಬಹಳ ಅಚ್ಚರಿಯಾಗಿತ್ತು. ಆದರೆ, ನಾವು ನಮ್ಮದೇ ಮೂಲಗಳೊಂದಿಗೆ ಹಾಗೂ ವೈಜ್ಞಾನಿಕವಾಗಿ ತನಿಖೆ ನಡೆಸಿದ್ದೆವು. ರೇಪ್ ಮಾಡಿದವರು ಎಂಜಿನೀಯರಿಂಗ್ ವಿದ್ಯಾರ್ಥಿಗಳಲ್ಲ ಎಂದು ಪ್ರವೀಣ್ ಸೂದ್ ಅವರು ಹೇಳಿದರು.
ಈವರೆಗೆ ದುಷ್ಕೃತ್ಯಕ್ಕೆ ಗುರಿಯಾದ ಸಂತ್ರಸ್ಥೆ ಪೊಲೀಸರಿಗೆ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹೇಳಿಕೆಯನ್ನಾಗಲಿ ನೀಡಿಲ್ಲ. ಆಕೆ ಸ್ನೇಹಿತ ನಮಗೆ ಸ್ವಲ್ಪ ಮಾಹಿತಿ ಕೊಟ್ಟಿದ್ದು ಬಿಟ್ಟರೆ, ಮೈಸೂರು ಮತ್ತು ದಕ್ಷಿಣ ವಲಯದ ಪೊಲೀಸರು ಏಳು ತಂಡಗಳು ಕಾರ್ಯಾಚರಣೆ ನಡೆಸಿ ತೀವ್ರ ಶೋಧ ನಡೆಸಿದ್ದವು ಎಂದು ಅವರು ಹೇಳಿದರು.

ಲಭ್ಯವಾದ ಆಧಾರಗಳು, ಟೆಕ್ನಿಕಲ್ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ನಮ್ಮ ತಂಡಗಳು ಹಗಲಿರಳು ಕೆಲಸ ಮಾಡಿ, ಅಂತಿಮವಾಗಿ ಐವರು ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೊಬ್ಬನನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಪ್ರವೀಣ್ ಸೂದ್ ತಿಳಿಸಿದರು.

ಮೈಸೂರಿಗೆ ತಮಿಳುನಾಡು ಕಡೆಯಿಂದ ಬರುವ ತರಕಾರಿ ಸಾಗಿಸುವ ವಾಹನದಲ್ಲಿ ಇವರುಗಳು ಬಂದು ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಇತ್ಯಾದಿ ಕೃಷಿ ಉತ್ಪನ್ನಗಳನ್ನು ಹಾಕುವ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಪ್ರವೀಣ್ ಸೂದ್ ಅವರು ಹೇಳಿದರು.

ಕೂಲಿ ಕೆಲಸ ಮಾಡಿ ವಾಪಸ್ ಹೋಗುವಾಗ ನಿರ್ಜನ ಪ್ರದೇಶಗಳಲ್ಲಿ ಮದ್ಯ ಸೇವಿಸಿ ಹೋಗುತ್ತಿದ್ದರು. ಹೀಗೆ ಹೋಗುವಾಗ ಇಂಥ ದುಷ್ಕೃತ್ಯ ಎಸಗಿದ್ದರು ಎಂದು ಪ್ರವೀಣ್ ಸೂದ್ ಅವರು ಹೇಳಿದರು.

ಸಂತ್ರಸ್ಥೆಯ ಗೆಳೆಯನಿಂದ 3 ಲಕ್ಷಕ್ಕೆ ಡಿಮಾಂಡ್ ಮಾಡಿದ್ದರು. ಆದರೆ, ಆತನಿಗೆ ಹಣ ನೀಡಿರಲಿಲ್ಲ ಎಂದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನಮ್ಮ ವಶಕ್ಕೆ ಪಡೆಯುತ್ತೇವೆ ಎಂದರು.

ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯ ತೀವ್ರಗತಿಯಲ್ಲಿ ಕೆಲಸ ಮಾಡುತ್ತಿದೆ. ಆದಷ್ಟು ಬೇಗ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುತ್ತೇವೆ. ಆದಷ್ಟು ಬೇಗ ವಿಚಾರಣೆ ಮುಗಿದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಅವರು ವಿವರಿಸಿದರು.

ಐದು ಲಕ್ಷ ರೂ. ಬಹುಮಾನ
ಆರೋಪಿಗಳನ್ನು ಹುಡುಕಿ ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಇದೇ ವೇಳೆ ಐದು ಲಕ್ಷ ರೂ. ಬಹುಮಾನವನ್ನು ಪೊಲೀಸ್ ಮಹಾ ನಿರ್ದೇಶಕರು ಘೋಷಣೆ ಮಾಡಿದರು. ನಮ್ಮ ತಂಡಗಳ ಪೊಲೀಸರು ಹಗಲಿರಳು ಕೆಲಸ ಮಾಡಿದ್ದಾರೆ. ಒತ್ತಡ ಹೆಚ್ಚಿದ್ದ ಕಾರಣಕ್ಕೆ ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸಿದ್ದಾರೆಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯದ ಎಡಿಜಿಪಿ ಪ್ರತಾಪ್ ರೆಡ್ಡಿ, ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಚೇತನ್ ಮುಂತಾದ ಅಧಿಕಾರಿಗಳು ಇದ್ದರು.

ಬೆಳಗಿನಜಾವ ಬಲೆಗೆ ಬಿದ್ದರು
ಶನಿವಾರ ಬೆಳಗಿನಜಾವ ಐದು ಗಂಡೆ ಸುಮಾರಿಗೆ ಐವರನ್ನೂ ಬಲೆಗೆ ಕೆಡವಿಕೊಂಡಿರುವ ಪೊಲೀಸರು, ಅವರನ್ನು ಮೈಸೂರಿಗೆ ಕರೆತಂದಿದ್ದಾರೆ.

ಕೆಲ ಮಹತ್ವದ ಆಧಾರಗಳನ್ನು ಇಟ್ಟುಕೊಂಡು ತನಿಖೆಯ ಜಾಡು ಹಿಡಿದಿದ್ದ ಪೊಲೀಸರು, ಏಳೂ ತಂಡಗಳಾಗಿ ಬೇರ್ಪಟ್ಟು ತೀವ್ರ ತನಿಖೆ ನಡೆಸಿದ್ದರು. ಸಾಕ್ಷ್ಯಗಳನ್ನು ಕಲೆ ಹಾಕಲು ಭಾರೀ ಸವಾಲು ಎದುರಿಸಿದ್ದ ಪೊಲೀಸರು, ತಮ್ಮ ಬಳಿ ಇರುವ ಎಲ್ಲ ಪುರಾವೆಗಳನ್ನು ಇಟ್ಟುಕೊಂಡು ಶೋಧ ನಡೆಸಿದ್ದರು.

ಇನ್ನು ಸತತವಾಗಿ ಮೂರು ದಿನ ಸಂತ್ರಸ್ತ ಯುವತಿ ಹಾಗೂ ಯುವಕನನ್ನು ಫಾಲೋ ಮಾಡಿದ್ದ ಕಿರಾತಕರು, ನಾಲ್ಕನೇ ದಿನ ಈ ದುಷ್ಕತ್ಯ ಎಸಗಿದ್ದರು ಎನ್ನಲಾಗಿದೆ.

ಸಂತ್ರಸ್ಥೆಯ ಗೆಳೆಯ ನೀಡಿದ ಮಾಹಿತಿ, ಕೃತ್ಯ ನಡೆದ ಸ್ಥಳದಲ್ಲಿ ಲಭ್ಯವಾದ ಕೆಲ ಸಾಕ್ಷ್ಯಗಳು, ತಾಂತ್ರಿಕ ಆಧಾರಗಳನ್ನು ಕಲೆಹಾಕಿ ಆಳವಾಗಿ ತನಿಖೆಗಿಳಿದ ಪೊಲೀಸರನ್ನು ತಿರುಫೂರ್ʼಗೆ ಕರೆದುಕೊಂಡು ಹೋಗಿದ್ದು, ಇಡೀ ಪ್ರಕರಣಕ್ಕೆ ಮಹತ್ವದ ಲೀಡ್ ಸಿಕ್ಕಿದೆ. ಮೊಬೈಲ್ ಲೊಕೇಷನ್ ವಿವರ ಪೊಲೀಸರಿಗೆ ನೆರವಾಗಿದೆ. ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ.

85 ಗಂಟೆಗಳ ನಂತರ
ಅಗಸ್ಟ್ 24ರ ಸಂಜೆ ಸುಮಾರು 7ರಿಂದ 7-30ರ ಸುಮಾರಿನ ನಸುಗತ್ತಲೆಯಲ್ಲಿ ಹೀನ ಕೃತ್ಯ ಎಸಗಿದ್ದ ದುರುಳರು, ವಾಯು ವಿಹಾರಕ್ಕೆ ತೆರಳಿದ್ದ ಯುವಕ-ಯುವತಿಯ ಮೇಲೆ ದಾಳಿ ಮಾಡಿದರಲ್ಲದೆ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಘಟನೆ ನಡೆಯುವುದಕ್ಕೆ ಮೊದಲು ನಿರಂತರವಾಗಿ ಮೂರು ದಿನ ಯುವಕ-ಯುವತಿ ಅದೇ ಸ್ಥಳಕ್ಕೆ ವಿಹಾರಕ್ಕೆ ಬರುತ್ತಿದ್ದನ್ನು ಕಂಡಿದ್ದ ಇವರು, ನಾಲ್ಕನೇ ನೀಚಕೃತ್ಯ ಎಸಗಿದ್ದಾರೆ. ಕೃತ್ಯ ಎಸಗುವುದಕ್ಕೆ ಮುನ್ನ ಮದ್ಯ ಸೇವನೆಯನ್ನೂ ಮಾಡಿದ್ದರು ಎನ್ನಲಾಗಿದೆ.

ಈ ಘಟನೆಯಿಂದ ಮೈಸೂರು ನಗರ ಮಾತ್ರಲ್ಲದೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಆರೋಪಿಗಳನ್ನು ಬಂಧಿಸಲು ಭಾರೀ ಒತ್ತಡ ಎದುರಾಗಿತ್ತು ಮಾತ್ರವಲ್ಲದೆ, ನಿನ್ನೆ ಇಡೀ ದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮೈಸೂರಿನಲ್ಲೇ ಇದ್ದು, ಸರಣಿ ಸಭೆಗಳನ್ನು ನಡೆಸಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೇ ನೇರವಾಗಿ ತನಿಖೆಯ ಉಸ್ತುವಾರಿ ವಹಿಸಿಕೊಂಡಿದ್ದರು.

ಇನ್ನೂ ಹೇಳಿಕೆ ನೀಡದ ಸಂತ್ರಸ್ಥೆ
ಅತ್ಯಾಚಾರಕ್ಕೀಡಾದ ಯುವತಿ ಇನ್ನೂ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಆಕೆ ಮತ್ತು ಆಕೆಯ ಪೋಷಕರು ತೀವ್ರ ಶಾಕ್ ಗೆ ಒಳಗಾಗಿದ್ದಾರೆಂದು ಗೊತ್ತಾಗಿದೆ. ಯುವತಿ ತಮ್ಮ ಪೋಷಕರೊಂದಿಗೆ ಚಿಕಿತ್ಸೆ ನಂತರ ನೆರೆ ರಾಜ್ಯದ ತಮ್ಮ ಊರಿಗೆ ತೆರಳಿದ್ದಾರೆಂದು ಗೊತ್ತಾಗಿದ್ದು, ಆಕೆ ಹೇಳಿಕೆ ದಾಖಲು ಮಾಡಿಕೊಳ್ಳುವುದು ಪೊಲೀಸರ ಪಾಲಿಗೆ ಸವಾಲು ಎನ್ನಲಾಗಿದೆ.