ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಶೂಗಳನ್ನು ಬಿಚ್ಚದೇ ಪೂಜಾ ಕಾರ್ಯಕ್ರಮಗಳನ್ನು ನೆರೆವೇರಿಸಿದ್ದಾರೆ.
ಶನಿವಾರ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ಹೋಬಳಿಯ ನಾಗರೆಡ್ಡಿಹಳ್ಳಿ ಬಳಿ ಆಶ್ರಯ ತಾಣ ನಿರ್ಮಿಸುವ ಗೋಶಾಲೆ ಭೂಮಿಪೂಜೆ ಹಾಗೂ ಅಬ್ಲೂಡು ಕೆರೆಗೆ ಬಾಗನ ಅರ್ಪಿಸಿ ಗಂಗಾ ಮಾತೆಗೆ ಪೂಜೆ ಸಲ್ಲಿಸುವ ವೇಳೆ ಅವರು ಶೂ ಧರಿಸಿಯೇ ಪೂಜೆ ನೆರೆವೇರಿಸಿದ್ದು, ಜನರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಿಲ್ಲೆಯಲ್ಲಿ ಮಾತ್ರವಲ್ಲದೆ, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಸಚಿವರು ಮಾತ್ರವಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಾರೊಬ್ಬರೂ ದೇವರ ಪೂಜೆಗೆ ಗೌರವ ತೋರದೇ ಅಪಚಾರವೆಸಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತೀಯ ಪರಂಪರೆಯ ಪ್ರಕಾರ ದೇವರ ಪೂಜೆ ಮಾಡುವ ಸಂದರ್ಭದಲ್ಲಿ ಯಾರೂ ಪಾದರಕ್ಷೆ, ಶೂ ಧರಿಸುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ಇಂಥ ಸಂಪ್ರದಾಯವನ್ನು ಬಹಳ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದೆ. ಅಷ್ಟೇ ಏಕೆ, ಸಂಘದ ನಾಯಕರು ಗೋಶಾಲೆಗಳನ್ನು ಪ್ರವೇಶ ಮಾಡಬೇಕಾದರೂ ಚಪ್ಪಲಿ ಕಳಚಿಟ್ಟು ಪ್ರವೇಶ ಮಾಡುತ್ತಾರೆ.
ಹೀಗಿದ್ದರೂ ಚಿಕ್ಕಬಳ್ಳಾಪುರದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುದಾಕರ್ ಅವರಂತು ಬಿಜೆಪಿ ಮತ್ತು ಸಂಘ ಪರಿವಾರ ಅಥವಾ ಸಮಸ್ತ ಹಿಂದೂ ಸಮಾಜ ನಂಬಿರುವ ಶ್ರದ್ಧೆಗೆ ವಿರುದ್ಧವಾಗಿ ವರ್ತಸಿದರಲ್ಲದೆ, ಬೂಟುಗಳನ್ನು ಧರಿಸಿಯೇ ಪೂಜೆ ನೆರೆವೇರಿಸಿದರು.
ಅಕ್ಕಪಕ್ಕದಲ್ಲಿ ನೆರೆದಿದ್ದ ಜನರು ಮಾತ್ರ, “ನಮ್ಮ ಸಾಹೇಬ್ರು ಬೂಟು ಬಿಚ್ಚದೇ ಪೂಜೆ ಮಾಡುತ್ತಿದ್ದಾರೆ” ಎಂದು ಮಾತನಾಡಿಕೊಂಡರೂ ಸಚಿವ ಸುಧಾಕರ್ ಇದಾವುದರ ಪರಿವೇ ಇಲ್ಲದೆ ಶೂ ಹಾಕಿಕೊಂಡೇ ಪೂಜೆ ಕೈಂಕರ್ಯ ನೆರವೇರಿಸಿ ಆರತಿಯನ್ನೂ ಸ್ವೀಕರಿಸಿದರು.
ಸಚಿವ ಸುಧಾಕರ್ ಮಾತ್ರವಲ್ಲ, ಅವರ ಪಕ್ಕದಲ್ಲೇ ಇದ್ದ ಮಾಜಿ ಸಚಿವ, ಶಾಸಕರು ಆದ ವಿ.ಮುನಿಯಪ್ಪನವರೂ ಚಪ್ಪಲಿ ಕಳಚಲಿಲ್ಲ. ಅವರ ಪಕ್ಕದಲ್ಲೇ ನಿಂತಿದ್ದ ಮಾಜಿ ಶಾಸಕ ರಾಜಣ್ಣ ಕೂಡ ಒಂದು ಚಪ್ಪಲಿ ಬಿಚ್ಚಿ ಅದರ ಮೇಲೆ ಕಾಲಿಟ್ಟುಕೊಂಡು ಇನ್ನೊಂದು ಚಪ್ಪಲಿ ಧರಿಸಿ ಭಕ್ತಿ ಪ್ರದರ್ಶಿಸಿದರು.
ಉಳಿದಂತೆ ಅಲ್ಲಿ ನೆರೆದಿದ್ದ ಜಿಲ್ಲೆಯ ಅಧಿಕಾರಿಗಳೆಲ್ಲ ಠೀವಿಯಿಂದ ಚಪ್ಪಲಿ, ಶೂ ಧರಿಸಿಕೊಂಡೇ ಪೂಜೆಯಲ್ಲಿ ಭಾಗಿಯಾಗಿದ್ದರು.
ಶೂ ಹಾಕಿಕೊಂಡೇ ಗಂಗಾ ಮಾತೆಗೂ ಪೂಜೆ
ಗೋಶಾಲೆಯ ಭೂಮಿಯನ್ನು ಸಚಿವ ಸುಧಾಕರ್ ಈ ರೀತಿ ಮಾಡಿದರೆ, ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿಯ ಅಬ್ಲೂಡು ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಆ ಕೆರೆಗೆ ಬಾಗಿನ ಅರ್ಪಿಸಿ, ಗಂಗಾ ಪೂಜೆ ಸಲ್ಲಿಸಿದ ಕಾರ್ಯಕ್ರಮದಲ್ಲೂ ಸಚಿವರು ಶೂ ಧರಿಸಿಯೇ ಬಾಗಿನ ಅರ್ಪಿಸಿದ್ದಾರೆ.
ಕರೆಗೆ ಬಾಗಿನ ಬಿಡುವಾಗಲಾಗಲಿ ಅಥವಾ ಕೆರೆಯಂಗಳದಲ್ಲಿ ಗಂಗೆಗೆ ಪೂಜೆ ಸಲ್ಲಿಸುವಾಗ ಆಗಲಿ ಸಚಿವರು ಶೂ ಕಳಚಿಡುವ ಗೋಜಿಗೇ ಹೋಗಲಿಲ್ಲ. ಸಚಿವರಂತೆ ಅಲ್ಲಿ ನೆರೆದಿದ್ದವರಾರೂ ಪಾದರಕ್ಷೆ ಕಳಚಲಿಲ್ಲ. ಕಾಟಾಚಾರಕ್ಕೆ ಪೂಜೆ ನಡೆಯಿತಷ್ಟೇ. ಎಂದರೆ ಪತ್ತಾಗಲಾರದು.
ಆದರೆ, ಎರಡೂ ಕಡೆ ನಡೆದ ಪೂಜೆಯ ಬಗ್ಗೆ ಜನರು ತಮ್ಮ ಪಾಡಿಗೆ ತಾವು ಮಾತನಾಡಿಕೊಂಡು ಸುಮ್ಮನಾದರು.
ಶೂ ಬಿಚ್ಚಿ ಪೂಜೆ ಮಾಡಬೇಕಿತ್ತು
ಪಂಚಭೂತಗಳಲ್ಲಿ ಒಂದಾದ ನೀರಿನ ಬಗ್ಗೆ ನಮ್ಮ ಆಚಾರ-ವಿಚಾರಗಳಲ್ಲಿ ಬಹಳಷ್ಟು ನಂಬಿಕೆ, ಶ್ರದ್ಧೆ ಅಡಗಿದೆ. ಅಲ್ಲಿಯೂ ಅವರು ಬೂಟುಗಳನ್ನು ಧರಿಸಿ ಪೂಜೆ ಮಾಡಿರುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಗೆ ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುತ್ತಾರೆ ಎಂಬುದನ್ನು ಸಚಿವ ಡಾ. ಸುಧಾಕರ್ ನೋಡಿ ಕಲಿಯಬೇಕು. ಓರ್ವ ಮಂತ್ರಿಯಾಗಿ ಪೂಜೆಯ ವೇಳೆ ಅವರು ಶೂ ಬಿಚ್ಚಲಿಲ್ಲ ಅನ್ನುವ ಕಾರಣಕ್ಕೆ ಅಲ್ಲಿ ಸೇರಿದ್ದ ಉಳಿದವರೂ ಪಾದರಕ್ಷೆ ತೆಗೆಯಲಿಲ್ಲ. ಯಥಾ ರಾಜ, ತಥಾ ಪ್ರಜಾ ಎನ್ನುವಂತಿವೆ ಆ ದೃಶ್ಯಗಳು.