ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿನ ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿದ್ದರು.
63 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯು 900 ಮಂದಿಗೆ ಉದ್ಯೋಗ ಕಲ್ಪಿಸಿದೆ. 30 ಮಂದಿ ಮಹಿಳೆಯರು ಕೆಲಸ ಮಾಡುತ್ತಿರುವ ಸಂಸ್ಥೆ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರವು ದೇಶದ ಮೂಲೆ, ಮೂಲೆಗಳಿಗೂ ರಾಷ್ಟ್ರಧ್ವಜ ಪೂರೈಸುತ್ತಿದೆ. ಇದು ಭಾರತೀಯ ಮಾನಕ ಸಂಸ್ಥೆಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯಾಗಿದೆ.
ಇಂಥ ಹೆಗ್ಗಳಿಕೆ ಹೊಂದಿರುವ ಸಂಸ್ಥೆಗೆ ಇಂದು ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು, ರಾಷ್ಟ್ರಧ್ವಜ ತಯಾರಿಕೆ ಪ್ರಕ್ರಿಯೆಯನ್ನು ವೀಕ್ಷಿಸಿದರು. ರಾಷ್ಟ್ರಧ್ವಜಕ್ಕೆ ಸ್ವತಃ ಇಸ್ತ್ರಿ ಮಾಡುವ ಮೂಲಕ ಆ ಪ್ರಕ್ರಿಯೆಯಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡರು.
ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ಸಂಸ್ಥೆಯ ಉತ್ಪಾದನಾ, ಮಾರಾಟ ಮಳಿಗೆಗಳ ಸಿಬ್ಬಂದಿ ಸಮರ್ಪಕ ಕೆಲಸವಿಲ್ಲದೆ ನಿತ್ಯ ಜೀವನ ಸಾಗಿಸಲು ಆಗಿರುವ ತೊಂದರೆ ಬಗ್ಗೆ ಅಲ್ಲಿನ ಸಿಬ್ಬಂದಿ ತಿಳಿಸಿರು.
ಇದರ ಜತೆಗೆ, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯು ಬಾಕಿ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಆಗಿರುವ ಅನಾನುಕೂಲದ ಬಗ್ಗೆ ಸಂಸ್ಥೆಯ ಮೇಲ್ವಿಚಾರಕರು ಹೇಳಿಕೊಂಡರು. ಜತೆಗೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಯಾಗಿ, ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುವುದಾಗಿ ಶಿವಕುಮಾರ್ ಅವರು ಭರವಸೆ ನೀಡಿದರು.
ಮಾಜಿ ಸಚಿವ ವೀರಣ್ಣ ಮತ್ತಿಕಟ್ಟಿ, ಕುಲದೀಪ್ ರಾಯ್ ಶರ್ಮಾ, ಪ್ರಸಾದ ಅಬ್ಬಯ್ಯ, ನೇರಳಕೇರಿ, ಶರಣಪ್ಪ ಕೋಟಗಿ, ಸದಾನಂದ ಮತ್ತಿತರರು ಜತೆಗಿದ್ದರು.