ಚಾಮರಾಜನಗರ : ಲಸಿಕಾ ಮಹಾ ಅಭಿಯಾನ ನಡೆಯುತ್ತಿರುವ ನಡುವೆ ವ್ಯಾಕ್ಸಿನೇಷನ್ಗೆ ಮತ್ತಷ್ಟು ವೇಗ ನೀಡಲು ಚಾಮರಾಜನಗರ ಡಿಸಿ ಡಾ.ಎಂ ಆರ್ ರವಿ ಮುಂದಾಗಿದ್ದಾರೆ.
ಲಸಿಕೆ ಪಡೆಯದಿದ್ದರೇ ಪಡಿತರ, ಪಿಂಚಣಿ ತಡೆ ಹಿಡಿಯುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಈ ಸಂಬಂಧ ಸೆ.1ರಿಂದ “ನೋ ವ್ಯಾಕ್ಸಿನೇಷನ್-ನೋ ರೇಷನ್, ನೋ ವ್ಯಾಕ್ಸಿನೇಷನ್-ನೋ ಪೆನ್ಷನ್” ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದ್ದಾರೆ.
ಸಾಕಷ್ಟು ಜಾಗೃತಿ, ನಿರಂತರ ಅರಿವು ಮೂಡಿಸುತ್ತಿದ್ದರೂ ಲಸಿಕೆ ಪಡೆಯಲು ಅಸಡ್ಡೆ ತೋರುತ್ತಿರುವವರಿಗೆ ಬಿಸಿ ಮುಟ್ಟಿಸಲು ಡಿಸಿ ರವಿ ಈ ತೀರ್ಮಾನ ಕೈಗೊಂಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ಮಾತನಾಡಿ, ಕಳೆದ 27ರಿಂದ ಜಿಲ್ಲೆಯಲ್ಲಿ “ಲಸಿಕಾ ಮಹಾ ಮೇಳ” ಅಭಿಯಾನ ನಡೆಯುತ್ತಿದೆ. ಎಲ್ಲಾ ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ತೀವ್ರವಾಗಿ ನಡೆಯುತ್ತಿದೆ. 238 ತಂಡ ಸೇರಿದಂತೆ 27 ಮೊಬೈಲ್ ತಂಡ ಕಾರ್ಯ ನಿರ್ವಹಿಸುತ್ತಿವೆ
ಈಗಾಗಲೇ ಜಿಲ್ಲೆಯಲ್ಲಿ ಶೇ.75ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆದಾಗ್ಯೂ, ಕೆಲವರಲ್ಲಿ ಉದಾಸೀನ ಪ್ರವೃತ್ತಿ ಇರುವುದರಿಂದ ಪಡಿತರ ಸೌಲಭ್ಯ ಸಿಗಬೇಕಾದರೆ ಲಸಿಕೆ ಪಡೆದಿರಬೇಕೆಂಬ “ನೋ ವ್ಯಾಕ್ಸಿನೇಷನ್-ನೋ ರೇಷನ್” ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ ಎಂದರು.
ಜನರಲ್ಲಿ ಗಂಭೀರತೆ ಮೂಡಿಸಲು, ಅಸಡ್ಡೆ ಮಾಡಬಾರದೆಂದು ತಿಳಿ ಹೇಳುವ ಉದ್ದೇಶದಿಂದ ಜಿಲ್ಲೆಯಲ್ಲಿರುವ 2 ಲಕ್ಷದಷ್ಟು ಪಿಂಚಣಿದಾರರು ಲಸಿಕೆ ಪಡೆದಿರಬೇಕೆಂದು “ನೋ ವ್ಯಾಕ್ಸಿನೇಷನ್-ನೋ ಪೆನ್ಷನ್” ಎಂಬ ಕಾರ್ಯಕ್ರಮವನ್ನು ಜಾರಿ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಲಸಿಕೆ ಪಡೆಯದಿರುವವರಿಗೆ ಪಿಂಚಣಿ ಕೊಡಬಾರದೆಂದು ಸೂಚಿಸಿದ್ದೇನೆ ಎಂದು ತಿಳಿಸಿದರು.