ನೋ ವ್ಯಾಕ್ಸಿನ್-ನೋ ರೇಷನ್ ಗೆ  ಆಕ್ಷೇಪ:  ಯೂ ಟರ್ನ್ ಹೊಡೆದ ಜಿಲ್ಲಾದಿಕಾರಿ 

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: “ನೋ‌ ವ್ಯಾಕ್ಸಿನೇಷನ್‌- ನೋ ರೇಷನ್, ನೋ ಪೆನ್ಷನ್” ಜಾರಿ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ  ರಾಜಕೀಯ ಮುಖಂಡರಿಂದ ಆಕ್ಷೇಪ, ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾಮರಾಜನಗರ ಡಿಸಿ ತಮ್ಮ ತೀರ್ಮಾನದಿಂದ ಯೂ‌ ಟರ್ನ್ ಹೊಡೆಯುವ ಮೂಲಕ ನುಣುಚಿಕೊಂಡಿದ್ದಾರೆ.

ಈ ಸಂಬಂಧ ಬುಧವಾರ   ಪ್ರಕಟಣೆ ಬಿಡುಗಡೆ ಮಾಡಿರುವ  ಡಿಸಿ ಡಾ.ಎಂ.ಆರ್.ರವಿ,‌ ಆ ರೀತಿಯ ಯಾವುದೇ ಅಧಿಕೃತ ಆದೇಶವನ್ನು ಇದುವರೆವಿಗೂ ನೀಡಿಲ್ಲವಾದ್ದರಿಂದ ಪಿಂಚಣಿದಾರರಿಗೆ ಮತ್ತು ಪಡಿತರದಾರರಿಗೆ ಸೇವೆ ನಿರಾಕರಿಸುವ ಪ್ರಶ್ನೆಯೇ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗಷ್ಟೆ ಜಿಲ್ಲಾದಿಕಾರಿ ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೆ ನೀಡುವ ತರಾತುರಿಯಲ್ಲಿ ಮಾತನಾಡಿದ ಅವರು, ಸೆ.1  ರಿಂದ ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ತಡೆ ಹಿಡಿಯುವ ಕಾರ್ಯಕ್ರಮ ರೂಪಿಸಲಾಗಿದೆ.‌ ಈಗಲೂ ಲಸಿಕೆ ಪಡೆಯಲು ಅಸಡ್ಡೆ ತೋರುವವರಿಗೆ, ಉದಾಸೀನ ಪ್ರವೃತ್ತಿಯವರು ಇರುವುದರಿಂದ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.

ಇದಾದ ಬಳಿಕ, ಡಿಸಿ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ   ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜಕೀಯ ಮುಖಂಡರು, ನೆಟ್ಟಿಗರು ಪರ ವಿರೋಧ ಚರ್ಚೆ ನಡೆಸಿದ್ದರು. ಆದರೆ ಇದೀಗ ಅಧಿಕೃತ ಆದೇಶ ಹೊರಡಿಸೊ ಮೂಲಕ ನಾನು ಆ ತರಹ ಹೇಳಿಲ್ಲ ಎಂದು ಹೇಳಿ  ಯೂ ಟರ್ನ್ ಹೊಡೆದಿದ್ದಾರೆ.