ಮೈಸೂರು: ಅಪ್ರಾಪ್ತ ವಯಸ್ಸಿನ ಹುಡುಗ-ಹುಡುಗಿ ಪ್ರೀತಿಸುತ್ತಿದ್ದುದ್ದನ್ನು ಸಹಿಸದ ಹುಡುಗಿಯ ಮನೆಯವರು
ಹುಡುಗನಿಗೆ ಪೊಲೀಸ್ ಮೂಲಕ ಥಳಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.
ಕೆ.ಆರ್.ನಗರ ತಾಲೂಕಿನ ಚೀರನಹಳ್ಳಿ ಗ್ರಾಮದ ಅಪ್ರಾಪ್ತ ಹುಡುಗ ಮತ್ತು ಹುಡುಗಿ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ಈ ವಿಷಯ ಇಬ್ಬರ ಮನೆಯವರಿಗೂ ಗೊತ್ತಾಗಿದೆ. ಅವರಿಬ್ಬರ ಪ್ರೀತಿಯನ್ನು ಮನೆಯವರು ನಿರಾಕರಿಸಿದ್ದಾರೆ. ಆದರೂ ಹುಡುಗ-ಹುಡುಗಿ ತಮ್ಮ ಪ್ರೇಮವನ್ನು ಮುಂದುವರಿಸಿದ್ದರು ಎಂದು ತಿಳಿದು ಬಂದಿದೆ.
ಪ್ರೀತಿಸುತ್ತಿದ್ದ ಹುಡುಗ-ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದು, ಈ ವೇಳೆ ಕೆ.ಆರ್. ನಗರ ಪೆÇಲೀಸ್ ಠಾಣೆಯಲ್ಲಿ ಹುಡುಗಿಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇದಾದ ನಂತರ ಹುಡುಗ-ಹುಡುಗಿ ವಾಪಸ್ ಮರಳಿದ್ದರು. ಹುಡುಗನನ್ನು ವಿಚಾರಣೆ ನಡೆಸಿ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ನಂತರ ಹುಡುಗನ ತಾಯಿ ಬಾಲಮಂದಿರದಿಂದ ಮಗನನ್ನು ಮನೆಗೆ ಕರೆದು ಕೊಂಡು ಹೋಗಿದ್ದರು.
ಈ ಘಟನೆ ನಂತರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮತ್ತೆ ಹುಡುಗಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಲಾಗಿತ್ತು.
ಕಳೆದೆರಡು ದಿನಗಳ ಹಿಂದೆ ಹುಡುಗನನ್ನು ಪೊಲೀಸರು ಠಾಣೆಗೆ ಕರೆಸಿ, ಹುಡುಗಿಯ ಮನೆಯವರಿಗೆ ಪರಿಚಯವಿರುವ ಸಬ್ ಇನ್ಸಪೆಕ್ಟರ್ ಹುಡುಗನನ್ನು ಲಾಡ್ಜ್ ನಲ್ಲಿ ಇರಿಸಿ, ಓರ್ವ ಪೆÇಲೀಸ್ ಸಿಬ್ಬಂದಿಯಿಂದ ಹುಡುಗನಿಗೆ ಥಳಿಸಿದ್ದರು ಎನ್ನಲಾಗಿದೆ.
ಇದರಿಂದ ಹುಡುಗನ ಮೈಮೇಲೆ ಗಾಯಗಳಾಗಿದ್ದು, ಹುಡುಗ ಇನ್ನು ಮುಂದೆ ಹುಡುಗಿಯ ವಿಷಯಕ್ಕೆ ಹೋಗದಿರುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇದರಿಂದ ಭಯಗೊಂಡ ಹುಡುಗನ ಮನೆಯವರು ತಮಗೆ ಜೀವ ಭಯವಿದೆ. ತಮಗೆ ನ್ಯಾಯ ದೊರಕಿಸಿಕೊಡಿ ಎಂದು ಹುಡುಗನ ತಂದೆ-ತಾಯಿ ಮೊರೆಯಿಟ್ಟಿದ್ದಾರೆ.