ಮಡಿಕೇರಿ: ಗುತ್ತಿಗೆದಾರನಿಂದ ಲಕ್ಷಾಂತರ ರೂ. ಲಂಚ ಸ್ವೀಕರಿಸುತ್ತಿದ್ದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೇರಿ 5 ಮಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಡಿಕೇರಿಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಇ.ಇ . ಶ್ರೀ ಶ್ರೀಕಂಠಯ್ಯ, ಟೆಕ್ನಿಕಲ್ ಅಸಿಸ್ಟೆಂಟ್ ತೌಸಿಫ್, ಎಸ್ ಡಿಎ ರಮೇಶ್, ಕಂಪ್ಯೂಟರ್ ಆಪರೇಟರ್ ಪವನ್ ಹಾಗೂ ಮಧ್ಯವತಿ ಸಂತೋಷ್ ಬಂಧಿತರು.
ಘಟನೆ ವಿವರ: ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಕೊಳಗದಾಳು ಗ್ರಾಮದ ಕ್ಲಾಸ್ -1 ಗುತ್ತಿಗೆದಾರರೊಬ್ಬರು 2021ನೇ ಸಾಲಿನ ಬೇಂಗೂರು ಗ್ರಾಮ ಪಂಚಾಯ್ತಿಯ ಕೊಳಗದಾಳು, ಬಾಡಗ, ಕೊಟ್ಟೂರು ಹಾಗೂ ಬೇಂಗೂರು ಗ್ರಾಮದಲ್ಲಿ ಮಳೆಹಾನಿಯಿಂದ ಹಾಳಾಗಿರುವ 4 ರಸ್ತೆಗಳಲ್ಲಿ , 16 ಲಕ್ಷ ರೂಗಳ ಪೀಸ್ ವರ್ಕ್ ಕಾಮಗಾರಿ ಹಾಗೂ ಸದರಿ ಗ್ರಾಮಗಳ 5 ಮೋರಿಗಳ ( ಕಲ್ವರ್ಟ್ ಕಾಮಗಾರಿ ) ಕೆಲಸಕ್ಕೆ ಒಂದು ಮೋರಿಗೆ ಒಂದೂವರೆ ಲಕ್ಷದಂತೆ 5 ಮೋರಿಗೆ 7,50,000 ರೂಗಳು , ಒಟ್ಟು 23,50,000 ರೂಗಳ ಪೀಸ್ವರ್ಕ್ ಕಾಮಗಾರಿ ಬಗ್ಗೆ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿಗೆ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದು , ಸದರಿ ಕಾಮಗಾರಿಗಳ ಮಂಜೂರಾತಿ ಮಾಡಿಕೊಡುವ ಅಗ್ರಿಮೆಂಟ್ ಪಡೆಯಲು ಹಾಗೂ ಮೂರ್ನಾಡು ಗ್ರಾಮ ಮತ್ತು ಮಡಿಕೇರಿ ನಗರದ ಕಸವಿಲೇವಾರಿ ಘಟಕದ ಒಟ್ಟು 28.5 ಲಕ್ಷ ಕಾಮಗಾರಿಯನ್ನು ಸಹ ಪಡೆದಿದ್ದು , ಈ ಕಾಮಗಾರಿಗಳ ಬಗ್ಗೆ ಸೆ.16ರಂದು ಮಡಿಕೇರಿ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಹೋಗಿ ಇ.ಇ. ಶ್ರೀಕಂಠಯ್ಯ , ಟೆಕ್ನಿಕಲ್ ಅಸಿಸ್ಟೆಂಟ್ ತೌಸಿಫ್ , ಕಂಪ್ಯೂಟರ್ ಆಪರೇಟರ್ ಕವನ್ ರವರುಗಳು ಕ್ರಮವಾಗಿ 1,92,000 ರೂಗಳು , 75,000 ರೂ ಸೇರಿದಂತೆ ಒಟ್ಟು 2,67,000 ರೂ ಲಂಚದ ಹಣಕ್ಕೆ ಒತ್ತಾಯಿಸಿದ್ದರು.
ಈ ಹಿನ್ನೆಲಯಲ್ಲಿ ಗುತ್ತಿಗೆ ದಾರ ಎಸಿಬಿಗೆ ನೀಡಿದ ದೂರಿನ ಮೇರೆಗೆ ಸೆ. 18ರಂದು ಟ್ರಾಪ್ ಕಾರ್ಯಾಚರಣೆ ಕೈಗೊಂಡು, ಮಡಿಕೇರಿಯಲ್ಲಿರುವ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಇ.ಇ ಶ್ರೀಕಂಠಯ್ಯ ಎಸ್.ಡಿ.ಎ ರಮೇಶ್ ರವರ ಮೂಲಕ 1,92,000 ರೂಗಳ ಲಂಚದ ಹಣವನ್ನು ಪಡೆದಿದ್ದು , ಟೆಕ್ನಿಕಲ್ ಅಸಿಸ್ಟೆಂಟ್ ತೌಸಿಫ್ 75 ಸಾವಿರ ರೂ. ಲಂಚದ ಹಣವನ್ನು ಪಡೆದು, ಖಾಸಗಿ ಚಾಲಕ ಸಂತೋಷ್ ಇವರ ಬಳಿ ನೀಡಿರುತ್ತಾರೆ .
ಸಂತೋಷ್ ರವರ ಬಳಿಯಿದ್ದ ಬ್ಯಾಗ್ನ್ನು ಶೋಧ ಮಾಡಿದಾಗ, ಬ್ಯಾಗ್ನಲ್ಲಿ 75 ಸಾವಿರ ರೂ ಲಂಚದ ಹಣ ಹಾಗೂ 1,43,500 ರೂಗಳ ಹೆಚ್ಚುವರಿ ಅಕ್ರಮ ಹಣ ದೊರೆತಿದ್ದು, ಸದರಿ ಲಂಚ ಹಾಗೂ ಹೆಚ್ಚುವರಿ ಅಕ್ರಮ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಸದರಿ ಆರೋಪಿತರುಗಳೊಂದಿಗೆ ಕಂಪ್ಯೂಟರ್ ಆಪರೇಟರ್ ಕವನ್ ಸಹ ಭಾಗಿಯಾಗಿದ್ದು ಇವರೆಲ್ಲರು ಕೊಡಗು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದ ಟ್ರಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ.
ಐದು ಜನ ಆರೋಪಿತರುಗಳನ್ನು ಎಸಿಬಿ ಅಧಿಕಾರಿಗಳು ದಸ್ತಗಿರಿ ಮಾಡಿ ಒಟ್ಟು 4,10,500 ರೂಗಳನ್ನು ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಡಿವೈಎಸ್ಪಿಗಳಾದ ಕೃಷ್ಣಮೂರ್ತಿ, ಸದಾನಂದ ತಿಪ್ಪಣ್ಣನ್ನವರ್, ಕಿರಣ್ ಕುಮಾರ, ಕುಮಾರ್ ಗೌಡ, ಹರೀಶ್ , ಕೊಡಗು ಮತ್ತು ಚಾಮರಾಜನಗರ ಜಿಲ್ಲಾ ಎಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.