ಭಾರತ್ ಬಂದ್: ಚಾ.ನಗರದಲ್ಲಿ ಮಿಶ್ರಪ್ರತಿಕ್ರಿಯೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆಗಳಲ್ಲಿ ರಸ್ತೆಗಿಳಿದಿರುವ ರೈತರು ಹಾಗೂ ವಿವಿಧ ಸಂಘಟನೆಗಳು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದಲ್ಲಿ ಭಾರತ್ ಬಂದ್ ಬೆಂಬಲಿಸಿ ರೈತರು ಸೇರಿದಂತೆ ಹಲವು ಸಂಘಟನೆಗಳು ನಗರದಲ್ಲಿ ಬೆಳಗ್ಗೆಯೇ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ.

ರೈತ ಸಂಘ, ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಗೆ ಎಸ್ ಡಿಪಿಐ, ಬಿಎಸ್ಪಿ, ಕನ್ನಡಪರ ಸಂಘಟನೆಗಳ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.

ಪೆÇಲೀಸರ ಎದುರೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಾರಿಗೆ ಸಂಸ್ಥೆ ನಿಲ್ದಾಣ ಮುಂಭಾಗವು ರೈತರು ಧರಣಿ ನಡೆಸುತ್ತಿದ್ದು, ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿವಿಧ ಸಂಘಟನೆಗಳ ಪ್ರತಿಭಟನೆ ನಂತರ ವಾಹನ ಸಂಚಾರ ನಗರದಲ್ಲಿ ಎಂದಿನಂತೆ ಇತ್ತು. ಸಾರಿಗೆ ಬಸ್ಸುಗಳು, ಆಟೋ, ಟ್ಯಾಕ್ಸಿಗಳು ಸಂಚರಿಯುತ್ತಿದ್ದವು.

ಹಾಗೆಯೇ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ತೆರದು ವ್ಯಾಪಾರ ವಹಿವಾಟು ನಡೆಸಿದರು.