ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಕರ್ನಾಟಕದ ರಾಜಭವನ ಜನಸಾಮಾನ್ಯರ ಕಣ್ಣಲ್ಲಿ ಹಿಂದಿ ಭಾಷಿಕರ, ನಿವೃತ್ತಿ ಅಂಚಿನಲ್ಲಿರುವ ರಾಜಕೀಯ ಪಕ್ಷಗಳ ಹಿರಿಯರ
ತಾಣ ಎಂಬುದು ಜನಜನಿತವಾಗಿತ್ತು.
ಕಳೆದ 30 ವರ್ಷಕ್ಕಿಂತಲೂ ಈ ಹಿಂದೆ ರಾಜ್ಯಪಾಲರಾಗಿದ್ದ ವಿಎಸ್ ರಮಾದೇವಿ ಕನ್ನಡದಲ್ಲಿ ಮಾತನಾಡುತ್ತಿದ್ದರು. ಅವರ ನಂತರ ಯಾರು ಕನ್ನಡದಲ್ಲಿ ಮಾತನಾಡಲಿಲ್ಲ. ಆಗಿ ಹೋದಂತೆಲ್ಲಾ ರಾಜ್ಯಪಾಲರು ಉತ್ತರ ಭಾರತೀಯರೇ, ಯಾರು ಇಲ್ಲಿನ ಕನ್ನಡ ಭಾಷೆಯ ಕಲಿಯುವ, ಮಾತನಾಡುವ ಪ್ರಯತ್ನ ಸಹ ಮಾಡಲಿಲ್ಲ. ಅವರಿಗೆ ಆಸಕ್ತಿ ಇರಲಿಲ್ಲವೋ, ಆ ಪರಿಸ್ಥಿತಿ ಒದಗಿ ಬರಲಿಲ್ಲವೋ ಎಂಬ ಪ್ರಶ್ನೆ ನಿಗೂಢವಾಗಿಯೇ ಉಳಿದಿದೆ.
ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಹಂತದಲ್ಲಿ ಹೆಚ್ಚಾಗಿ ಉತ್ತರ ಭಾರತೀಯರನ್ನೇ ನೇಮಕ ಮಾಡುತ್ತದೆ.
ದಕ್ಷಿಣ ಭಾರತ ರಾಜ್ಯಗಳಿಗೆ ಉತ್ತರದಿಂದ ರಾಜ್ಯಪಾಲರಾಗಿ ಬಂದವರಿಗೆ ಭಾಷೆಯ ಸಮಸ್ಯೆ ಕಾಡುತ್ತಿರುತ್ತದೆ. ಹಾಗೇ ರಾಜ್ಯಪಾಲರಾಗಿ ಬಂದವರು ಸ್ಥಳೀಯ ಭಾಷೆಯನ್ನು ಕಲಿಯುವ ಪ್ರಯತ್ನ ಮಾಡುವುದು ಅಪರೂಪ. ಒಂದೆರೆಡು ಪದ ಕಲಿತು ಭಾಷಣ ಮಾಡಿ ಸುಮ್ಮನಾಗುತ್ತಾರೆ. ಇಲ್ಲಿನ ಸ್ಥಳೀಯ ಭಾಷೆ ಬಾರದ ಅವರುಗಳು ಇಲ್ಲಿಯ ಜನರಿಗೆ, ಸರ್ಕಾರ, ನಡುವಿನ ಅಂತರ ಸಂರ್ಘಷದ ಹಂತಕ್ಕೂ ಹೋದ ಸಂದರ್ಭದ ನೋಡ ಬಹುದು.
ಅದರೆ ಮತ್ತೆ ಕರ್ನಾಟಕದ ರಾಜಭವನದಲ್ಲಿ ಕನ್ನಡದ ಕಲರವ ಕೇಳುತ್ತಿದೆ. ಇದಕ್ಕೆ ಕಾರಣ ಈ ವರ್ಷ ಜುಲೈ ತಿಂಗಳಿನಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿರುವ ಮಧ್ಯಪ್ರದೇಶ ಮೂಲದ ಥಾವರ್ ಚಂದ್ ಗೆಹ್ಲೋಟ್ ಅವರು ಕಳೆದ ಎರಡು ತಿಂಗಳಿನಿಂದ ಕನ್ನಡ ಕಲಿಯುತ್ತಿದ್ದಾರೆ.
ರಾಜ್ಯಪಾಲರ ಕನ್ನಡ ಕಲಿಕೆ ಆಸಕ್ತಿಯ ಈ ನಡೆ ಕನ್ನಡಿಗರನ್ನು ಪುಳಕಗೊಳಿಸಿದ್ದು, ಅಭಿನಂದನೆಗಳ ಮಹಾಪೂರ ಹರಿದು ಬರಲಾರಂಭಿಸಿದೆ. ಅವರ ಕನ್ನಡ ಭಾಷೆಯನ್ನು ಕಲಿಯುವುತ್ತಿರುವುದು ಮಾದರಿಯ ನಡೆಯಾಗಿದೆ.
ಗೆಹ್ಲೋಟ್ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಕನ್ನಡಿಗರನ್ನು ಗೌರವಿಸುತ್ತೇನೆ ಅನ್ನುವುದನ್ನು ಸೂಚಿಸಿದ್ದರು.
ಕರ್ನಾಟಕದಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವ ಮೊದಲ ರಾಜ್ಯಪಾಲರು ಇವರಾಗಿದ್ದು, ಹಾಗೆಯೇ ಅವರು ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕನ್ನಡದಲ್ಲೇ ಟ್ವೀಟ್ ಮಾಡುತ್ತಿರುವುದು ಆಗಿದೆ. ಭಾರತದ ಯಾವುದೇ ರಾಜ್ಯವಿರಲಿ ಅಲ್ಲಿನ ಸ್ಥಳೀಯ ಭಾಷೆಗೆ ನೀಡಬೇಕಾದ ಪ್ರಾಮುಖ್ಯತೆ ನೀಡಲೇಬೇಕು.
ರಾಜ್ಯಪಾಲರಿಗೆ ದಿನ ನಿತ್ಯ 1 ಗಂಟೆಗಳ ಕಾಲ ಕನ್ನಡ ಪಾಠ ನಡೆಯಲಿದ್ದು, ಮೊದಲ ದಿನ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಇತಿಹಾಸದ ಬಗ್ಗೆ ರಾಜ್ಯಪಾಲರಿಗೆ ಪಾಠ ಮಾಡಲಾಗಿದ್ದು, ಕನ್ನಡ ವರ್ಣಮಾಲೆ ಅಭ್ಯಾಸ ಪ್ರಾರಂಭವಾಗಿದೆ. ಅದಕ್ಕಾಗಿ ಜ್ಞಾನಮೂರ್ತಿ ಅನ್ನುವವರನ್ನು ರಾಜ್ಯಪಾಲರ ಶಿಕ್ಷಕರಾಗಿ ನೇಮಿಸಲಾಗಿದ್ದು, ಕನ್ನಡ ನಿಘಂಟನ್ನು ಕೂಡ ಖರೀದಿಸಿದ್ದಾರೆ. ಕನ್ನಡ-ಹಿಂದಿ, ಇಂಗ್ಲಿಷ್-ಕನ್ನಡ ನಿಘಂಟುಗಳ ಜತೆಗೆ ಕಲಿಕೆಗೆ ಅನುಕೂಲವಾಗುವ ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ. ಈ ನಿಘಂಟುಗಳ ಸಹಾಯದಿಂದ ಹಲವು ಶಬ್ದಗಳನ್ನು ನಿತ್ಯ ಕಲಿಯುತ್ತಿದ್ದಾರೆ.
ಹಿಂದಿ ಮೂಲದ ಗೆಹ್ಲೋಟ್ ಅವರು ಕನ್ನಡ ಕಲಿಯುವ ಮೂಲಕ ರಾಜ್ಯ ಭಾಷೆಯ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.
ರಾಜಭವನದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ಅವರಿಗೆ ಹೊಸ ಶಬ್ದಗಳು ಮತ್ತು ವಾಕ್ಯ ರಚನೆ ಕುರಿತು ಕನ್ನಡ ಕಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ರಾಜ್ಯದ ರಾಜ್ಯಪಾಲರಾಗಿ ಭಾಷೆಯ ಅನುಷ್ಠಾನದ ಪ್ರಸ್ತಾಪ ಬಂದರೆ ಯಾವುದೇ ಸಂಶಯವಿಲ್ಲದೇ ಕನ್ನಡವೇ ಸಾರ್ವಭೌಮ ಎಂಬ ನಿಲುವು ನನಗಿದೆ ಎಂದು ಗೆಹ್ಲೋಟ್ ಹೇಳಿದ್ದರು.
ಕರ್ನಾಟಕದ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನದಲ್ಲಿ ನಮ್ಮ ಸಹಕಾರ ಮತ್ತು ಕನ್ನಡಿಗರ ತಾರ್ಕಿಕ ಸಮಸ್ಯೆಗಳಾಗಿ ಉಳಿದಿರುವ ಉದ್ಯೋಗದಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ, ಶಿಕ್ಷಣ ವಲಯದಲ್ಲಿ ಕಡ್ಡಾಯ ಕನ್ನಡ ಕಲಿಕಾ ಅಧಿ ನಿಯಮದ ಸಂಪೂರ್ಣ ಅನುಷ್ಠಾನ, ತಂತ್ರಜ್ಞಾನದಲ್ಲಿ ಕನ್ನಡ ತಂತ್ರಾಂಶಗಳ ಆಶವಿಷ್ಕಾರ ಹಾಗೂ ಬಳಕೆ ಇನ್ನೂ ಮುಂತಾದ ಮೂಲಭೂತ ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಿ, ಕನ್ನಡದ ಅಸ್ಮಿತೆಯ ಉಳಿವಿಗೆ ಪ್ರಾಧಿಕಾರದ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಮನವಿ ಸಲ್ಲಿಸಲಾಗಿತ್ತು ಅದಕ್ಕೆ ಮನಃಪೂರ್ತಿಯಾಗಿ ಗೆಹ್ಲೋಟ್ ಒಪ್ಪಿಕೊಂಡಿದ್ದರು.
ಈ ಹಿಂದಿನ ರಾಜ್ಯಪಾಲರು ಅಧಿವೇಶನಗಳಲ್ಲಿ ಭಾಷಣ ಇತರ ಬೇರೆ ಕಾರ್ಯಕ್ರಮಗಳಲ್ಲಿ ಹಿಂದಿಯಲ್ಲೇ ಭಾಷಣ ಮಾಡುತ್ತಿದ್ದರು. ಅಲ್ಲದೇ, ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡುತ್ತಿದ್ದ ಭಾಷಣ ಮೊದಲು ಇಂಗ್ಲಿಷ್ ಹಾಗೂ ಕನ್ನಡದಲ್ಲಿರುತ್ತಿತ್ತು. ಬಳಿಕ ಹಿಂದಿಯಲ್ಲಿ ಮುದ್ರಿತವಾದ ಭಾಷಣದ ಪ್ರತಿ ನೀಡುವ ಪದ್ಧತಿ ಜಾರಿಗೆ ಬಂದಿತ್ತು.
ಅದಕ್ಕೂ ಮೊದಲು ರಾಜ್ಯಪಾಲರಾಗಿದ್ದ ಎಚ್‍ಆರ್ ಭಾರದ್ವಾಜ್ ಅವರು, ಕನ್ನಡ ಕಲಿಯುವುದಾಗಿ ಹೇಳಿದ್ದರು, ಆದರೆ ಕಲಿತಿರಲಿಲ್ಲ.
ಹಿಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರ ಅವಧಿಯಲ್ಲಿ ರಾಜಭವನದಲ್ಲಿ ಕನ್ನಡ ಭಾಷೆಗೆ ಸ್ಥಾನವೇ ಇಲ್ಲದಂತಾಗಿತ್ತು. ಸಂಪೂರ್ಣ ಗುಜರಾತಿ ಮತ್ತು ಹಿಂದಿಮಯವಾಗಿತ್ತು. ಇದು ಸಾಕಷ್ಟುಟೀಕೆಗೆ ಒಳಪಟ್ಟಿತ್ತು.
ಈ ಬಗ್ಗೆ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ಹಲವು ಬಾರಿ ಆಕ್ರೋಶವನ್ನೂ ಹೊರಹಾಕಿದ್ದರು. ಇದೀಗ ಈಗಿನ ರಾಜ್ಯಪಾಲರು ಕನ್ನಡ ಕಲಿಯಲು ಮುಂದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ನಿಮ್ಮ ಈ ಕ್ರಾಂತಿಕಾರಿ ನಡೆಗೆ ನಮ್ಮ ಗೌರವಪೂರ್ವಕ ಅಭಿನಂದನೆಗಳು ಎಂದು ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯವರು ಹೇಳಿದ್ದಾರೆ.
ರಾಜ್ಯಪಾಲ ಗೆಹಲೋತ್ ಅವರ ಈ ನಡೆಗೆ ಕನ್ನಡ ಪರ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಡೆ ಇತರ ರಾಜ್ಯಗಳಿಂದ ಆಗಮಿಸುವವರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.
ರಾಜ್ಯಪಾಲರಾದ ಥಾವರ್‍ಚಂದ್ ಗೆಹಲೋತ್ ಅವರು ಕನ್ನಡ ಕಲಿಯುತ್ತಿರುವ ಸುದ್ದಿ ಕೇಳಿ ಬಹಳ ಸಂತೋಷವಾಯಿತು. ಅವರ ಕನ್ನಡ ಅಭಿಮಾನ ಶ್ಲಾಘನೀಯ. ಹೊರರಾಜ್ಯಗಳಿಂದ ಬಂದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ರಾಜ್ಯಪಾಲರ ನಡೆ ಪ್ರೇರಣೆಯಾಗಲಿ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯನ್ನು ಕಲಿಕೆಗಾಗಿ ನಿಘಂಟುಗಳನ್ನು ಓದುತ್ತಿರುವುದು ತಮ್ಮ ಜೊತೆಗಿನ ಅಧಿಕಾರಿಗಳೊಂದಿಗೆ ಕನ್ನಡ ಪದಗಳ ಬಗ್ಗೆ ತಿಳಿದು ಮಾತನಾಡುವುದು ಕನ್ನಡ ಭಾಷೆ ಬಗೆಗಿನ ಆಸಕ್ತಿ ತೊರಿಸುತ್ತದೆ, ಇದಕ್ಕೆ ಕಾರಣ ಈ ಹಿಂದೆ ಕರ್ನಾಟಕದೊಂದಿಗಿನ ಒಡನಾಟವೂ ಕಾರಣವಾಗಿರಬಹುದು.
ರಾಜ್ಯಪಾಲರ ಈ ನಿರ್ಧಾರ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ನೀಡಿದಂತೆಯಾಗಿದೆ. ಈ ಹಿಂದೆ ಆಗಿಹೋದಂತಹ ರಾಜ್ಯಪಾಲರುಗಳು ಕನ್ನಡ ಭಾಷೆ, ಸಂಸ್ಕೃತಿ ಜನರ ಬಗೆಗಿನ ನಿರಾಸಕ್ತಿ ಕಾಣಬಹುದಾಗಿತ್ತು. ಅದರೆ ಈಗಿನ ರಾಜ್ಯಪಾಲರ ಕನ್ನಡ ಭಾಷೆಯನ್ನು ಕಲಿಯುವ ನಿರ್ಧಾರದಿಂದ ಸರ್ಕಾರ ಮತ್ತು ರಾಜ್ಯ ಭವನದ ಅಂತರ ಕಡಿಮೆಯಾಗಿ, ಜನೋಪಯೋಗಿ ಯೋಜನೆಗಳು, ಕಾಯಿದೆಗಳು, ಸಾಮಾಜಿಕ ಶೈಕ್ಷಣಿಕ ಆರ್ಥಿಕ ಅನುಮೋದನೆಗೆ ವೇಗ ಸಿಗಲಿದೆ ಮತ್ತು ಅಧಿವೇಶನ ಸಂದರ್ಭದಲ್ಲಿ ಹಿಂದಿಯಲ್ಲಿನ ಭಾಷಣ ಸಾಮಾನ್ಯವಾಗಿತ್ತು.
ಮುಂದಿನ ಅಧಿವೇಶನಗಳಲ್ಲಿ ರಾಜ್ಯಪಾಲರ ಭಾಷಣದಲ್ಲಿ ಕನ್ನಡ ಮೊಳಗಲಿದೆ. ಆಡಳಿತಾಂಗದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಇಂಗ್ಲೀಷ್ ಭಾಷೆಯ ಬಳಕೆಯ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಈ ಅಧಿಕಾರಿಗಳು ಇಂಗ್ಲೀಷಿನಲ್ಲೇ ಯೋಚಿಸುತ್ತಾರೆ, ಇಂಗ್ಲೀಷಿನಲ್ಲೇ ಬರೆಯುತ್ತಾರೆ. ಕನ್ನಡದಲ್ಲಿ ತೊದಲುತ್ತಾರೆ. ಇಂತಹ ಅಧಿಕಾರಿಗಳು ರಾಜ್ಯಪಾಲರ ಕನ್ನಡ ಕಲಿಕಾ ಆಸಕ್ತಿಯನ್ನು ಗಮನಿಸ ಬೇಕು,
ಬ್ಯಾಂಕಿಂಗ್, ರೈಲ್ವೆ, ಕೈಗಾರಿಕ ಐಟಿ-ಬಿಟಿ ಇತರ ಸೇವಾ ಕ್ಷೇತ್ರದಲ್ಲಿ ಇರುವಂತಹ ಕಂಪನಿಗಳು ಅಧಿಕಾರಸ್ಥರು, ಉನ್ನತ ಅಧಿಕಾರಿಗಳು ಮುಂತಾದವರು ಕನ್ನಡ ಭಾಷೆಯನ್ನು ಕಲಿಯವಂತಾಗಲಿ, ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆ ಸಿಗಲಿ ಎಂಬುದು ನಮ್ಮ ಆಶಯ.