ಮೈಸೂರು: ಸಿದ್ದರಾಮಯ್ಯ ಸಂಘಟನೆ ಎಲ್ಲಿದೆ ಅಂತ ಬ್ಯಾಟರಿ ಹಾಕಿ ಹುಡುಕಬೇಕಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಮಂಗಳವಾರ ಗೃಹ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಎಂದಿರುವ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾರಿಗೆ ಮನುಷ್ಯತ್ವ ಇಲ್ಲ ಯಾರಿಗೆ ಮನುಷ್ಯತ್ವ ಇದೆ ಎಲ್ಲರಿಗೂ ಗೊತ್ತಿದೆ ಎಂದರು.
ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿ ಅನೇಕ ಸಂಗತಿಗಳನ್ನು ಹೇಳಲೇಬೇಕಾಗತ್ತೆ. ಹೇಳುತ್ತಾ ಹೋಗುತ್ತಿದ್ದಾರೆ ಅಷ್ಟೇ ಎಂದು ಟಾಂಗ್ ನೀಡಿದರು.
ಆರ್ ಎಸ್ ಎಸ್ ನವರದ್ದು ತಾಲಿಬಾನಿ ಸಂಸ್ಕೃತಿ ಎಂದು ಟೀಕಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಂತಹ ಹಿರಿಯರು ಆಡಿದ ಮಾತಿಗೆ ನಾನೇನು ಹೇಳಲು ಹೋಗಲ್ಲ. ಸಿದ್ದರಾಮಯ್ಯನವರು ಹೊಟ್ಟೆಕಿಚ್ಚು ಪಡುವಷ್ಟು ಈ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ತಾಲಿಬಾನಿಗೂ ಆರ್ ಎಸ್ ಎಸ್ ಗೂ ಇರುವಂತಹ ವ್ಯತ್ಯಾಸವನ್ನು ಅಂತಹ ಹಿರಿಯರು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಅವರಿಗೂ ಅರ್ಥವಾಗಿದೆ. ವಿರೋಧ ಪಕ್ಷದವರಾಗಿ ಎಲ್ಲೋ ಒಂದು ಕಡೆ ಕೆಣಕಬೇಕು, ಚುಚ್ಚಬೇಕು ಜನರ ಎದುರಿಗೆ ಒಂದು ಸಂಘಟನೆಯನ್ನು ಅಪಹಾಸ್ಯ ಮಾಡಬೇಕು ಎಂದು ಹೇಳುತ್ತಾರೆಂದರು.
ಆರ್ ಎಸ್ ಎಸ್ ಒಳ್ಳೆಯದನ್ನು ಮಾಡು ಅಂತ ಹೇಳತ್ತೆ, ಈ ದೇಶಕ್ಕೆ ಪೂರಕವಾಗಿ ನಡೆದುಕೊಳ್ಳುವಂತೆ ತಿಳಿಸುತ್ತೆ. ನಿನ್ನ ಬದುಕಿಗೂ ದೇಶದ ಹಿತಕ್ಕೂ ಸಂಘರ್ಷ ಬಂದಾಗ ನಿನ್ನ ಬದುಕನ್ನು ಬಲಿಕೊಟ್ಟು ರಾಷ್ಟ್ರ ರಕ್ಷಣೆಗೆ ಮುಂದಾಗಲು ಹೇಳುವಂತಹ ಸಂಘಟನೆ ಇದ್ದರೆ ಈ ದೇಶದ ಆರ್ ಎಸ್ ಎಸ್. ಇದನ್ನು ನಾವು ಪ್ರೀತಿಸುತ್ತೇವೆ. ಹೇಳುತ್ತ ಹೋದಂತೆ ಜನರ ನಡುವೆ ಚರ್ಚೆ ಆಗಿ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಗೃಹ ಸಚಿವರು ಹೇಳಿದರು.
ದೇವಾಲಯ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿ ಅಧಿಕಾರಿಗಳು ಸರ್ಕಾರದ ನಿರ್ದೇಶನ ಪಡೆಯಬೇಕಾಗಿತ್ತು. ಕೋರ್ಟ್ ಆದೇಶವನ್ನು ಸರಿಯಾಗಿ ಓದಬೇಕಾಗಿತ್ತು. ಆಗಲಿಲ್ಲ, ಆಕಸ್ಮಿಕವಾಗಿ ನಡೆದಿದೆ. ಈಗ ಪೂರಕವಾದ ಕಾಯ್ದೆ ತಂದಿದ್ದೇವೆ. ಪವಿತ್ರ ಸ್ಥಳಗಳ ರಕ್ಷಣೆ ನಮ್ಮ ಹೊಣೆ ಅದನ್ನು ಮಾಡುತ್ತೇವೆ ಎಂದರು.