ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ದೀನಬಂಧು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಸೃಜನಶೀಲಾ ಕಲಿಕಾ ಕೇಂದ್ರ ರಾಮಸಮುದ್ರ, ಚಾಮರಾಜನಗರ ಇವರುಗಳ ಸಹಯೋಗದಲ್ಲಿ ಶನಿವಾರ ಚಾಮರಾಜನಗರ ಟೌನ್, ರಾಮಸಮುದ್ರದ ದೀನಬಂಧು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 75ನೇ ಭಾರತೀಯ ಸುವರ್ಣ ಮಹೋತ್ಸವದ ಅಂಗವಾಗಿ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿರವರ ಜಯಂತಿ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನಪುರಿರವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಂದೆ ತಾಯಿಗಳಿಗೆ ಗುರು ಹಿರಿಯರನ್ನು ಹಾಗೂ ಶಿಕ್ಷಣ ಕಲಿಸುವ ಶಿಕ್ಷಕರುಗಳನ್ನು ಗೌರವಿಸಬೇಕು ಹಾಗೂ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿರವರುಗಳ ಸರಳತೆ, ಸತ್ಯ, ಧರ್ಮ ಹಾಗೂ ಅವರುಗಳ ಸ್ಪೂರ್ತಿದಾಯಕ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಹಾಗೂ ಪ್ರತಿಯೊಬ್ಬ ಪ್ರಜೆಯು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ರವರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಂದೆ ತಾಯಿಯನ್ನು ಗೌರವಿಸುತ್ತಾ ಜೀವನದ ಭವಿಷ್ಯದಲ್ಲಿ ಉತ್ತಮವಾದ ಉನ್ನತಮಟ್ಟದ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಸಿಕೊಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರರವರು ಮಾತನಾಡಿ, ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ರವರುಗಳು ಸ್ವಾತಂತ್ರ್ಯ ಪಡೆಯುವ ಸಮಯದಲ್ಲಿ ಪಟ್ಟ ಕಷ್ಟಗಳು ಹಾಗೂ ಶಿಕ್ಷಣವನ್ನು ಸ್ವಾತಂತ್ರ ಹೋರಾಟಕ್ಕಾಗಿ ತ್ಯಾಗ ಮಾಡಿದ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಸಂವಿಧಾನ, ಕಾನೂನು ಹಾಗೂ ಬಡವರು ಕಾನೂನಿನ ನೆರವು ಪಡೆದುಕೊಳ್ಳುವುದರ ಬಗ್ಗೆ ಶಿಕ್ಷಕರುಗಳು ಶಾಲೆಯ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ ನೀಡಿದಲ್ಲಿ ಮಕ್ಕಳು ಬಾಲ್ಯದಿಂದ ಪ್ರಾಪ್ತ ವಯಸ್ಸಿಗೆ ಬಂದ ಸಮಯದಲ್ಲಿ ಆಗುವ ಅನಾನುಕೂಲಗಳನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ನೊಂದವರು ಹಾಗೂ ಬಡವರು ತಾಲ್ಲೂಕಿನ ಮಟ್ಟದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಮಟ್ಟದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ನ್ಯಾಯವನ್ನು ಹಾಗೂ ಕಾನೂನಿನ ನೆರವನ್ನು ಪಡೆಯಬಹುದಾಗಿರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ದೀನಬಂಧು ಶಾಲೆಯ ಕಾರ್ಯದರ್ಶಿಗಳಾದ ಬಿ.ಎಸ್. ಜಯದೇವ ರವರ ಮಾತನಾಡಿ, ಸ್ವರಾಜ್ಯ ಎಂಬುದು ನಮ್ಮ ದೇಹದ ಗುಣಗಳಾದ ಕಾಮ, ಕ್ರೋಧ, ಮದ ಮತ್ಸರಗಳನ್ನು ಒಂದು ಸ್ಥಿಮಿತದಲ್ಲಿ ಇಟ್ಟುಕೊಂಡು ನಾವು ಸ್ವಯಂ ಸ್ವರಾಜ್ಯವಾದಲ್ಲಿ ಮಾತ್ರ ಸಮಾಜವನ್ನು ಸ್ವರಾಜ್ಯವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ನಂತರ ಮಹಾತ್ಮ ಗಾಂಧೀಜಿಯವರ ಕನಸಾದ ಸ್ವಚ್ಛತಾ ಆಂದೋಲನದ ಅಂಗವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾಶಿವಎಸ್ ಸುಲ್ತಾನಪುರಿ, ಸದಸ್ಯ ಕಾರ್ಯದರ್ಶಿ ಶ್ರೀಧರ್, ಶಾಲೆಯ ಕಾರ್ಯದರ್ಶಿ ಬಿ.ಎಸ್. ಜಯದೇವ, ಶಾಲೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳಾದ ಶ್ರೀಮಂತ್ ಬಿಲ್ಕರ್, ಪುರುಷೋತ್ತಮ ಹಾಗೂ ರಘುರವರುಗಳು ಶಾಲೆಯ ಆವರಣದಲ್ಲಿ ಕಸವನ್ನು ಗೂಡಿಸುವ ಮೂಲಕ ಸ್ವಚ್ಛತಾ ಜಾಗೃತಿಯನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರುಗಳಿಂದ ಹಾಗೂ ಮಕ್ಕಳಿಂದ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜೀವನ ಚರಿತ್ರೆಯ ಕುರಿತು ಭಾಷಣವನ್ನು ಮಾಡುವ ಮೂಲಕ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜಯಂತಿಗೆ ಮೆರುಗನ್ನು ತಂದು ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸಿ. ನಾಗರಾಜು ಹಾಗೂ ಎಸ್. ಪ್ರಕಾಶ್ ರವರುಗಳು, ಮುಖ್ಯ ಶಿಕ್ಷಕರು, ದೀನಬಂಧು ಪ್ರೌಢಶಾಲೆ ಹಾಗೂ ಶಾಲೆಯ ಮಕ್ಕಳು ಮತ್ತು ಶಿಕ್ಷಕರ ವೃಂದದವರು ಹಾಜರಿದ್ದರು.