ವಿಜಯನಗರ (ಹೊಸಪೇಟೆ): ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ರಾಜ್ಯದ 31ನೇ ಜಿಲ್ಲೆ ವಿಜಯನಗರಕ್ಕೆ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.
ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿದ್ಯಾರಣ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಗೆ ಅಧಿಕೃತವಾಗಿ ಉದ್ಘಾಟಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
464 ಕೋಟಿರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂಭ್ರಮದ ಕ್ಷಣಕ್ಕೆ ನಾಡಿನ ಮಠಾಧೀಶರು, ಸಚಿವರು, ಶಾಸಕರು,ನಿಗಮ ಮಂಡಳಿಗಳ ಅಧ್ಯಕ್ಷರುಗಳು, ಜನಪ್ರತಿನಿಧಿಗಳು ಮತ್ತು ಅಸಂಖ್ಯಾತ ಜನರು ಸಾಕ್ಷಿಯಾದರು.
ಹೊಸಪೇಟೆ ನಗರದ ಹಂಪಿ ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗೆ ( ಬೈಪಾಸ್ ) ಚತುಷ್ಪಥರಸ್ತೆ ನಿರ್ಮಾಣ 11 ಕೋಟಿ ರೂ., ಹೊಸಪೇಟೆ ನಗರದಲ್ಲಿ 60 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ 11 ಕೋಟಿ ರೂ., ಹೊಸಪೇಟೆಯ ಜೋಳದರಾಶಿ ಗುಡ್ಡದ ಅಭಿವೃದ್ಧಿ ಕಾಮಗಾರಿ 10 ಕೋಟಿ ರೂ., ಹೊಸಪೇಟೆ ತಾಲೂಕು ಹಂಪಿಯಿಂದ ವಯಾ ಕಮಲಾಪುರ ಪಾಪಿನಾಯಕನಹಳ್ಳಿ ವರೆಗೆ ರಸ್ತೆ ಅಭಿವೃದ್ಧಿ 10ಕೋಟಿ ರೂ., ಹೊಸಪೇಟೆ ನಗರದಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆ 09 ಕೋಟಿ ರೂ., ಹೊಸಪೇಟೆ ತಾಲೂಕು ವೆಂಕಟಾಪುರದಿಂದ ಪಂಪಾ ವಿದ್ಯಾಪೀಠ ವಿಜಯನಗರ ಕ್ಷೇತ್ರದ ಕೊನೆಯ ಭಾಗದವರೆಗೆ ರಸ್ತೆ ಅಭಿವೃದ್ಧಿ 8.25 ಕೋಟಿ ರೂ. ಕಾಮಗಾರಿಗಳು ಸೇರಿದಂತೆ ರೂ. 99.66 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 24 ಕಾಮಗಾರಿಗಳಿಗೆ ಚಾಲನೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಹೊಸಪೇಟೆ ನಗರದ ಹೊಸಪೇಟೆ- ಬಳ್ಳಾರಿ ರಸ್ತೆ ಎಚ್ಎಲ್ಸಿ ಕಾಲುವೆಯಿಂದ ಇಂಗಳಗಿ ಕ್ರಾಸ್ವರೆಗೆ ರಸ್ತೆ ಅಭಿವೃದ್ಧಿ 30ಕೋಟಿ ರೂ. ವೆಚ್ಚದಲ್ಲಿ, ಹಂಪಿ ರಸ್ತೆಯ ಅನಂತಶಯನ ಗುಡಿಯಿಂದ ಕಮಲಾಪುರದವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿ 30ಕೋಟಿ ರೂ.ವೆಚ್ಚದಲ್ಲಿ, ಹೊಸಪೇಟೆ ನಗರದಲ್ಲಿ 250 ಹಾಸಿಗೆ ಆಸ್ಪತ್ರೆ ನಿರ್ಮಾಣ 105ಕೋಟಿ ರೂ. ವೆಚ್ಚದಲ್ಲಿ, ಹೊಸಪೇಟೆ ನಗರದ ಅನಂತಶಯನ ಗುಡಿ ರೈಲ್ವೆ ಗೇಟ್ಗೆ ಮೇಲು ಸೇತುವ ನಿರ್ಮಾಣ 26 ಕೋಟಿ ರೂ.ವೆಚ್ಚದಲ್ಲಿ, ಹೊಸಪೇಟೆ ನಗರದಲ್ಲಿ ಬಾಲಕಿಯರ ಶಾಲೆ, ಬಾಲಕಿಯರ ಪದವಿ ಪೂರ್ವ ಕಾಲೇಜ್ ಮತ್ತು ಮುನ್ಸಿಪಲ್ ಬಾಲಕಿಯರ ಶಾಲೆ ಕಟ್ಟಡ 24 ಕೋಟಿ ರೂ. ಸೇರಿದಂತೆ ರೂ.364.22 ಕೋಟಿ ವೆಚ್ಚದ ಒಟ್ಟು 55 ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದಸಿಂಗ್, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ್, ಡಾ.ಅಶ್ವತ್ ನಾರಾಯಣ, ವಿ.ಸುನೀಲಕುಮಾರ, ಎನ್.ಮುನಿರತ್ನ, ಭೈರತಿ ಬಸವರಾಜ, ಗೋಪಾಲಕೃಷ್ಣ, ಸಂಸದರಾದ ವೈ.ದೇವೇಂದ್ರಪ್ಪ, ಜಿ.ಎಂ.ಸಿದ್ಧೇಶ್ವರ, ಕರಡಿ ಸಂಗಣ್ಣ, ಶಾಸಕರಾದ ಪಿ.ಟಿ.ಪರಮೇಶ್ವರ ನಾಯಕ್, ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ನರಸಿಂಹ ನಾಯಕ(ರಾಜುಗೌಡ), ಎಂ.ಎಸ್.ಸೋಮಲಿಂಗಪ್ಪ, ಪರಣ್ಣ ಮನವಳ್ಳಿ, ಶಶೀಲ್ ನಮೋಶಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಎಂ.ಅಪ್ಪಣ್ಣ, ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ನ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ವಿನೋದ ನೋವೆಲ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ನಿರ್ದೇಶಕಿ ಸಿಂಧೂ ಬಿ.ರೂಪೇಶ ಮತ್ತಿತರರು ಇದ್ದರು.