ಬಿಟ್ಟು ಹೋಗುವವರು ಪಕ್ಷದ ಬಗ್ಗೆ ಲಘುವಾಗಿ ಮಾತನಾಡೋದು ಬೇಡ -ಹೆಚ್.ಡಿ.ಕೆ

ಬಿಡದಿ: ಪಕ್ಷದಲ್ಲಿ ಬೆಳೆದು ಬಿಟ್ಟು ಹೊರಹೋಗಿ ತೆಗಳಿದರೆ ಸುಮ್ಮನಿರಲಾಗದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಬಿಡದಿಯ ತೋಟದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗ ಜತೆ ಅವರು ಮಾತನಾಡಿದರು.

ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಕೆಲ ಶಾಸಕರ ಬಹಿರಂಗ ಹೇಳಿಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೆಚ್ ಡಿಕೆ ಪಕ್ಷ ತೊರೆಯುವ ಬಗ್ಗೆ ಕೆಲವರು ಅನಗತ್ಯವಾಗಿ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.

ಅವರೇ ಸ್ವತಃ ಗೊಂದಲ ಸೃಷ್ಟಿಸಿಕೊಂಡು ಬಹಿರಂಗ ಹೇಳಿಕೆ ಕೊಡುವುದು ಯಾಕೆ ? ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬಹುದಾದ ವಿಚಾರಗಳನ್ನು ಹೊರಗೆ ಹೇಳುವುದು ಸರಿಯಲ್ಲ. ಏನೇ ಸಮಸ್ಯೆ, ಗೊಂದಲ ಇದ್ದರೂ ಬರಲಿ. ಚರ್ಚೆ ಮಾಡಲು ನಾನು ಸಿದ್ಧ. ಯಾರೂ ಪಕ್ಷದ ಸಂಘಟನೆಗೆ ಹೊಡೆತ ಬೀಳುವಂತೆ ನಡೆದುಕೊಳ್ಳಬಾರದು ಎಂದು ಅವರು ಹೇಳಿದರು.

ಯಾರೇ ಶಾಸಕರು ಬಂದರು ಮುಕ್ತವಾಗಿ ನಾನು ಯಾವಾಗಲೂ ಮಾತನಾಡುತ್ತೇನೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧನಿದ್ದೇನೆ. ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ಆದರೆ, ಮೂರ್ನಾಲ್ಕು ಜನ ಪಕ್ಷ ತೊರೆಯುವ ಮಾತನ್ನಾಡಿದ್ದಾರೆ. ಅವರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿದ್ದೇವೆ ಎಂದು ಹೆಚ್ ಡಿಕೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಜೆಡಿಎಸ್ ಪುಟಿದೇಳುತ್ತಿದೆ
ಜೆಡಿಎಸ್ ಕಾರ್ಯಕರ್ತರ ಪಕ್ಷ. ಅದು ದುರ್ಬಲ ಆಗಿಲ್ಲ. ಆಗುವುದೂ ಇಲ್ಲ. ಪಕ್ಷದ ಕಾರ್ಯಗಾರಗಳು ಯಶಸ್ವಿಯಾಗಿ ನಡೆದಿವೆ. ಪಕ್ಷ ತಳಮಟ್ಟದಿಂದ ಪುಟಿದೇಳುತ್ತಿದೆ ಎಂದ ಅವರು, ಕಾಂಗ್ರೆಸ್ ನಿಂದಲೂ ಸಣ್ಣಪುಟ್ಟ ಜಾತಿಗಳ ಕಾರ್ಯಾಗಾರ ಆಯೋಜನೆ ನಡೆದಿದೆ. ನಮ್ಮ ಪಕ್ಷ ನಿಷ್ಕ್ರಿಯ ಆಗಿಬಿಟ್ಟಿದೆ ಅಂದುಕೊಂಡಿದ್ದರು ಕೆಲವರು. ಈಗ ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನಡುಕ ಉಂಟಾಗಿರುವಂತಿದೆ.ಅದೇ ಕಾರಣಕ್ಕೆ ನಮ್ಮಂತೆಯೇ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೆಚ್ ಡಿಕೆ ತಿರುಗೇಟು ನೀಡಿದರು.

ಯಾರನ್ನೂ ಪಕ್ಷ ಬಿಟ್ಟು ಹೋಗಿ ಅಂತ ನಾನು ಹೇಳಿಲ್ಲ. ಆದರೆ, ಪಕ್ಷ ತ್ಯಜಿಸಿ ಹೋದ ಮೇಲೆ ನಾನೇನು ಮಾಡಲು ಆಗುವುದಿಲ್ಲ. ಈ ಹಿಂದೆ ಕೆಲವರು ಪಕ್ಷದ ಶಕ್ತಿ ಬಳಸಿಕೊಂಡು ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋದರು.ಇವರಿಂದಲೇ ಪಕ್ಷದ ಸಂಘಟನೆ ಹಿಂದೆ ಉಳಿಯಿತು ಎಂದು ಅವರು ಹೇಳಿದರು.

ನಿನ್ನೆಯೂ ಒಬ್ಬ ಶಾಸಕರು ಹೇಳುತ್ತಿದ್ದರು, ನಾನಾಗಿಯೇ ಪಕ್ಷ ಬಿಟ್ಟು ಹೋಗಲ್ಲ, ನಾಯಕರೇ ಗೊಂದಲ ಸೃಷ್ಟಿ ಮಾಡ್ತಿರೋದು ಅಂದಿದ್ದಾರೆ. ನಾವ್ಯಾಕೆ ಗೊಂದಲ ಸೃಷ್ಟಿ ಮಾಡೋಣ. ಒಳಗೊಳಗೇ ಸಂಚು ರೂಪಿಸಿಕೊಂಡು ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಅಧಿಕಾರದ ರುಚಿ ಕಂಡು ನಡುನೀರಲ್ಲಿ ಕಾರ್ಯಕರ್ತರನ್ನು ಬಿಟ್ಟು ಹೋಗ್ತಾರೆ. ನಾಯಕರಿಂದ ಪಕ್ಷ ಅಲ್ಲ, ಕಾರ್ಯಕರ್ತರಿಂದ ಪಕ್ಷ. ಕೆಲವರು ಪಕ್ಷಕ್ಕೆ ಕುತ್ತಿಗೆ ಕುಯ್ದು ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದರು ಅವರು.

ನಮ್ಮಿಂದ ಯಾವುದೇ ಶಾಸಕರಿಗೆ ಅಪಚಾರವಾಗಿಲ್ಲ. ಪಕ್ಷ ಬಿಡೋರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದರು.