ಬೆಂಗಳೂರು: ಕರ್ನಾಟಕದಲ್ಲಿ ಮಾತ್ರ ಅಲ್ಲದೆ ದೇಶಾದ್ಯಂತ ಕಾಂಗ್ರೆಸ್ ನಶಿಸಿ ಹೋಗುತ್ತಿದ್ದು, ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಐದನೇ ದಿನದ ಜನತಾ ಪರ್ವ 1.ಔ ಹಾಗೂ ಮಿಷನ್ 123 ಕಾರ್ಯಗಾರದಲ್ಲಿ ಎಲ್ಲಾ ಜಿಲ್ಲೆಗಳ ಮುಸ್ಲಿಂ ಸಮುದಾಯದ ಪ್ರತಿನಿಧಿಗಳನ್ನು ಉದ್ದೇಶಿಸಿ ಹೆಚ್ ಡಿಕೆ ಅವರು ಮಾತನಾಡಿದರು.
ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ವೋಟಿನ ಯಂತ್ರದಂತೆ ಬಳಸಿಕೊಂಡಿತು. ರಾಜಕೀಯ ಸ್ವಾರ್ಥಕ್ಕಾಗಿ ಅಲ್ಪಸಂಖ್ಯಾತರ ಹಿತವನ್ನು ಬಲಿ ಕೊಟ್ಟಿತು ಎಂದು ಅವರು ಕಿಡಿ ಕಾರಿದರು.
ಹೆಚ್ ಡಿಕೆ ಅವರು ಭಾಷಣದಲ್ಲಿ ಹೇಳಿದ್ದಿಷ್ಟು:
ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಮುಸ್ಲಿಮರನ್ನು ರಾಜಕೀಯವಾಗಿ ಬಳಸಿಕೊಂಡು ಶೋಷಣೆ ಮಾಡುತ್ತಿದೆ.
ರಾಜೀವ್ ಗಾಂಧಿ ಅಯೋಧ್ಯೆಯಲ್ಲಿ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ನೀಡಿದರು. ಪಿವಿ ನರಸಿಂಹ ರಾವ್ ಇದ್ದಾಗ ಬಾಬರಿ ಮಸೀದಿ ಒಡೆಯಲು ಅವಕಾಶ ಕೊಟ್ಟರು. ಮಸೀದಿಯನ್ನು ಕೆಡವುತ್ತಾರೆ ಎಂದು ಗೊತ್ತಿದ್ದರೂ ಅವರ ಸರಕಾರ ರಕ್ಷಣೆ ಕೊಡದೇ ನಿದ್ದೆ ಮಾಡುತ್ತಿತ್ತು.
ಗೋಧ್ರಾ ಘಟನೆ ನಡೆದಾಗ ಹಿಂಸಾಚಾರಕ್ಕೆ ಬಿಜೆಪಿ ಕುಮ್ಮಕ್ಕು ಕೊಟ್ಟರೆ ಕಾಂಗ್ರೆಸ್ ಸುಮ್ಮನೆ ಇತ್ತು, ಅಂತಹ ವೇಳೆ ದೇವೇಗೌಡರು ಗುಜರಾತ್ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ್ದರು.
ಮನಮೋಹನ್ ಸಿಂಗ್ ಅವರ ಸರಕಾರ ಇದ್ದಾಗ ಬಿಜೆಪಿ ಮಾಡುತ್ತಿದ್ದ ಎಲ್ಲಾ ಶಾಂತಿ ಕದಡುವ ಕೆಲಸಗಳನ್ನು ನೋಡಿಕೊಂಡು ಸುಮ್ಮನಿತ್ತು. ಹೀಗೆ ಬಿಜೆಪಿಗೆ ಪರೋಕ್ಷವಾಗಿ ಎಲ್ಲಾ ದಾರಿಗಳನ್ನು ಕಾಂಗ್ರೆಸ್ ಸುಲಭ ಮಾಡಿಕೊಟ್ಟಿತು. ಇವತ್ತು ಮೋದಿ ಅವರು ಅಧಿಕಾರಕ್ಕೆ ಬರಲು ಕೂಡ ಕಾಂಗ್ರೆಸ್ ಪಕ್ಷದ ತಪ್ಪು ಹೆಜ್ಜೆಗಳೇ ಕಾರಣ.
ಕಾಂಗ್ರೆಸ್ ದಿನೇದಿನೆ ನಶಿಸಿಹೋಗುತ್ತಿದೆ. ಅದು ಆ ಪಕ್ಷದ ಸ್ವಯಂಕೃತ ಅಪರಾಧ. ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಪ್ರಾದೇಶಿಕ ಪಕ್ಷಗಳಿಗಿಂತ ಕೆಳಗೆ ಬಂದಿದೆ. ಜನತಾ ಪರಿವಾರ ದುರ್ಬಲ ಆಗಲು ಬಿಜೆಪಿ ಕೊಡುಗೆಯೂ ಇದೇ. ಈಗ ದೇಶ ಕವಲು ದಾರಿಯಲ್ಲಿದ್ದು, ಬಿಜೆಪಿ ಬರಲು ಕಾರಣ ಯಾರು ಎಂಬುದನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕಿದೆ.
2004ದಲ್ಲಿ ಸರಕಾರ ಮಾಡಲು ಬಿಜೆಪಿ ಮೊದಲು ನಮ್ಮ ಮನೆ ಬಾಗಿಲಿಗೆ ಬಂತು. ಎಲ್ಲಾ ಆಮಿಷಗಳನ್ನು ಒಡ್ಡಿದರು. ವಾಮನಾಚರ್ಯರು, ಇಬ್ಬರು ಪತ್ರಿಕಾ ಸ್ನೇಹಿತರು ಇದಕ್ಕೆ ಸಾಕ್ಷಿ. ಜೇಟ್ಲಿ ಈಗ ಇಲ್ಲ. ಒಡಿಶಾದ ನವೀನ್ ಪಟ್ನಾಯಕ್ ಅವರಿಗೆ ಕೊಟ್ಟ ಹಾಗೆ ನಿಮಗೂ ಸಹಕಾರ ಕೊಡುತ್ತೇವೆ ಎಂದರು. ನಾನು ಮನಸು ಮಾಡಿದ್ದರೆ ಅವರ ಬೆಂಬಲದಿಂದ ಸಿಎಂ ಆಗಿ ಕ್ರಮೇಣ ಅವರನ್ನು ದೂರ ಇಟ್ಟು ಅಧಿಕಾರ ನಡೆಸಬಹುದಿತ್ತು. ಕಳೆದ 25 ವರ್ಷಗಳಿಂದ ನವೀನ್ ಪಟ್ನಾಯಕ್ ಅವರು ಅಧಿಕಾರ ನಡೆಸುತ್ತಿರುವ ಹಾಗೆ ನಾನು ಕೂಡ ಇಲ್ಲಿ ಮಾಡಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ.
ಬಿಜೆಪಿ ಜತೆ ಸರಕಾರ ಮಾಡಲು ದೇವೇಗೌಡರು ಒಪ್ಪಲಿಲ್ಲ. ಆಮೇಲೆ ಇದೇ ಸಿದ್ದರಾಮಯ್ಯ, ಪಿಜಿಆರ್ ಸಿಂಧ್ಯಾ, ಎಂಪಿ ಪ್ರಕಾಶ್ ಅವರು ಐದು ದಿನ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆ ನಡೆಸಿದರು. ಸಿಎಂ. ಪಟ್ಟ ಬಿಟ್ಟು ಕೊಡಲು ಕಾಂಗ್ರೆಸ್ ತಯಾರು ಇರಲಿಲ್ಲ. ಸಿದ್ದರಾಮಯ್ಯ ಮುನಿಸಿಕೊಂಡು ಕರ್ನಾಟಕ ಭವನದಲ್ಲಿ ಮಲಗಿದ್ದರು. ಅವರನ್ನು ನಾನೇ ಸಮಾಧಾನಪಡಿಸಿದೆ. ಆಗ ಎಂಪಿ ಪ್ರಕಾಶ್, ಸಿಂಧ್ಯಾ ಅವರು ಡಿಸಿಎಂ ಆಗಲು ರೆಡಿ ಇದ್ದರು. ಆದರೆ ದೇವೇಗೌಡರಿಗೆ ಸಿದ್ದರಾಮಯ್ಯ ಅವರೇ ಆಗಬೇಕು ಎಂಬುದು ಇತ್ತು.
ಈ ಹಗ್ಗಜಗ್ಗಾಟ ನಡುವೆ ಧರ್ಮ ಸಿಂಗ್ ಸಿಎಂ ಅದರು. ಆರು ತಿಂಗಳ ಕಾಲ ಸಂಪುಟವೇ ಆಗಲಿಲ್ಲ. ತಲಾ ಆರು ಜನ ಮಂತ್ರಿಗಳಾದರು. ಆಗ ಕಾಂಗ್ರೆಸ್ ನಮ್ಮನ್ನು ಮೂರನೇ ದರ್ಜೆ ಪ್ರಜೆಗಳಂತೆ ನೋಡಿತು.ಈಗ ಮುಸ್ಲಿಮರನ್ನು ಕಾಂಗ್ರೆಸ್ ಹಾಗೆ ನೋಡುತ್ತಿದೆ. ಕಳೆದ 70 ವರ್ಷಗಳಿಂದ ಇದೇ ಆಗಿದೆ.
ಸಿದ್ದರಾಮಯ್ಯ ನಮ್ಮ ಪಕ್ಷದಿಂದ ದೂರ ಆಗತೊಡಗುತ್ತಿದ್ದಂತೆ ಯಡಿಯೂರಪ್ಪ ಬಂದರು. ಜಸ್ಟ್ ಮಂತ್ರಿ ಮಾಡಿ. ಬಿಜೆಪಿ ಬಿಟ್ಟು ಬರುತ್ತೇನೆ ಎಂದರು. ಒಬ್ಬ ಗನ್ ಮ್ಯಾನ್ ಜತೆ ಚೀಟಿ ಕಳಿಸಿದರು. ಆದರೆ ನಾನು ಅವರಿಗೆ ಬುದ್ಧಿ ಹೇಳಿದೆ. ಬಿಜೆಪಿ ಬಿಟ್ಟರೆ ಕೆಡ್ತಿರಿ ಎಂದೆ. ಅದೇ ನಾನು ಮಾಡಿದ ತಪು. ಆವತ್ತು ಅವರಿಗೆ ಬಿಜೆಪಿ ಬಿಡಲು ಹೇಳಿದ್ದರೆ ಆ ಪಕ್ಷ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.
ಆಮೇಲೆ ಸಿಎಂ ಉದಾಸಿ ಸೇರಿ ಜನತಾ ಪರಿವಾರದ ನಾಯಕರು ಬಂದು ಜೆಡಿಎಸ್ – ಬಿಜೆಪಿ ಸರಕಾರ ರಚನೆ ಮಾಡಲು ಬೇಡಿಕೊಂಡರು. ಕೊನೆಗೆ ಬಿಜೆಪಿ ಸರಕಾರ ರಚನೆ ಮಾಡಿ ನಮ್ಮ ತಂದೆ ಆರೋಗ್ಯ ಹಾಳಾಗಲು ನಾನೇ ಕಾರಣ ಆದೆ.
ಒಂದು ವೇಳೆ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಡದೆ ಹೋಗಿದ್ದಿದ್ದರೆ ಬಿಜಿಪಿ ಅಧಿಕಾರಕ್ಕೆ ಬರಲು ಆಗ್ತಾ ಇರಲಿಲ್ಲ. ಇದು ವಸ್ತು ಸ್ಥಿತಿ.
ಸಿದ್ದರಾಮಯ್ಯ ಅವರು ಅವರ ಶಕ್ತಿಯಿಂದ ಸಿಎಂ ಆಗಲಿಲ್ಲ. ಆಗ ಯಡಿಯೂರಪ್ಪ ನಡೆಸಿದ ಅಕ್ರಮಗಳನ್ನು ನಾವು ದಾಖಲೆ ಸಮೇತ ಜನರ ಮುಂದೆ ಇಟ್ಟೆವು. ಅವರು ಜೈಲಿಗೆ ಹೋದರು. ಬಳಿಕ ಕೆಜೆಪಿ ಕಟ್ಟಿದರು. ಶ್ರೀರಾಮುಲು ಹೊಸ ಪಕ್ಷ ಕಟ್ಟಿದರು. ಆ ಗ್ಯಾಪಿನಲ್ಲಿ ಸಿದ್ದರಾಮಯ್ಯ ಸಿಎಂ ಆದರು.
ಸಿಂಧಗಿ ಮತ್ತು ಹಾನಗಲ್ ಅಭ್ಯರ್ಥಿಗಳ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಅವರಿಗೆ ಗೊತ್ತಿರಲಿ, ನಾಲ್ಕು ತಿಂಗಳ ಹಿಂದೆಯೇ ನಾನು ನಾಜೀಯಾ ಶಕೀಲಾ ಅಂಗಡಿ ಅವರಿಗೆ ಚುನಾವಣೆ ಕೆಲಸ ಶುರು ಮಾಡಿಕೊಳ್ಳುವಂತೆ ಹೇಳಿದ್ದೆ. ಅಲ್ಲಿನ ಪರಿಸ್ಥಿತಿ ನನಗೆ ಗೊತ್ತಿದೆ. ಶಕೀಲಾ ಅವರು ಎಂ ಎ ಪದವೀಧರೆ. ನಮ್ಮ ಪಕ್ಷಕ್ಕಾಗಿ ತ್ಯಾಗ ಮಾಡಿದ ಕುಟುಂಬಕ್ಕೆ ಸೇರಿದವರು. ಹಾಗೆಯೇ ಹಾನಗಲ್ ನಲ್ಲಿ ಎಂ ಟೇಕ್ ಓದಿರುವ ನೀಯಾಜ್ ಶೇಕ್ ಎಂಬ ಯುವಕನಿಗೆ ಟಿಕೆಟ್ ಕೊಟ್ಟಿದ್ದೇವೆ.
ಬಿಜೆಪಿಗೆ ಶಕ್ತಿ ಬಂದಿದೆ. ಹಣ ಲೂಟಿ ಮಾಡಿದ್ದಾರೆ. ಅದರ ಅಂಗ ಸಂಸ್ಥೆಗಳಿಗೆ ಹಣದ ಕೊರತೆ ಇಲ್ಲ. ಹಳ್ಳಿ ಹಳ್ಳಿಗೂ ನುಗ್ಗಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ನೀವು ಸಂಘಟಿರಾಗಬೇಕು. ನಮ್ಮಿಂದ ಸೋಲಿಸಲು ಸಾಧ್ಯವಿದೆ.
ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ನಬಿ, ವಿಧಾನ ಪರಿಷತ್ ಸದಸ್ಯ ಫಾರೂಕ್ ಮುಂತಾದವರು ಉಪಸ್ಥಿತರಿದ್ದರು.