ಚಾಮರಾಜನಗರ: ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ್ದು, ಇದರಿಂದಲೇ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯನ್ನು ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಂತರ ಸಚಿವ ಡಾ. ಕೆ. ಸುಧಾಕರ್ ಮಾತನಾಡಿದರು.
ಭಾರತ ವಿವಿಧತೆಯನ್ನು ಹೊಂದಿರುವ ದೇಶ. ಕೋವಿಡ್ ಸಾಂಕ್ರಾಮಿಕವು ನಮ್ಮ ದೇಶ ಏಕತೆಯನ್ನು ಹೊಂದಿರುವ ದೇಶ ಎಂಬುದನ್ನು ಸಾಬೀತುಪಡಿಸಿದೆ. ಸಾಂಕ್ರಾಮಿಕದಲ್ಲೂ ಒಗ್ಗಟ್ಟು ಹೊಂದಿದ್ದೇವೆ ಎಂಬುದು ಕಂಡುಬಂದಿದೆ ಎಂದು ಹೇಳಿದರು. ಈ ಸಾಂಕ್ರಾಮಿಕವನ್ನು ತಡೆಗಟ್ಟಲು ಎಲ್ಲರ ಒಗ್ಗಟ್ಟು ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ಭೀಕರ ಸಾಂಕ್ರಾಮಿಕಕ್ಕೆ ಉತ್ತರ ನೀಡಿದೆ. 2014ರಲ್ಲಿ ಪ್ರಧಾನಿಯಾದ ಅವರು, 7 ವರ್ಷಗಳಲ್ಲಿ 157 ಹೊಸ ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಿದ್ದಾರೆ. 30,000 ಕ್ಕೂ ಅಧಿಕ ಹೊಸ ಮೆಡಿಕಲ್ ಸೀಟುಗಳನ್ನು ನೀಡಲಾಗಿದೆ ಎಂದರು.
ವೈದ್ಯಕೀಯ ಸೀಟುಗಳಲ್ಲಿ ಶೇ. 50ರಷ್ಟು ಹಾಗೂ ಪಿಜಿ ಸೀಟುಗಳಲ್ಲಿ ಶೇ. 80ರಷ್ಟು ಸೀಟುಗಳು ಹೆಚ್ಚಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಪ್ರಧಾನಿಗಳು ಹೊಸ ಮಾನವ ಸಂಪನ್ಮೂಲ ತಂದಿದ್ದಾರೆ. ಇಂದು ಕೂಡ ಪಿಎಂ ಕೇರ್ಸ್ ಫಂಡ್ ನಡಿ ವಿವಿಧೆಡೆ ಆಕ್ಸಿಜನ್ ಘಟಕಗಳನ್ನು ಉದ್ಘಾಟಿಸಲಾಗಿದೆ. ರಾಜ್ಯದಲ್ಲಿ ವೆಂಟಿಲೇಟರ್, ಆಕ್ಸಿಜನ್ ಹಾಸಿಗೆ, ಆಕ್ಸಿಜನ್ ಸಂಗ್ರಹಣೆ ಹೆಚ್ಚಾಗಿದೆ. ಈ ಮೂಲಕ ರಾಜ್ಯದ ಆರೋಗ್ಯ ವಲಯ ಬಲವಾಗಿದೆ ಎಂದರು.
ಈ ಬಾರಿ ರಾಜ್ಯದಲ್ಲಿ ಇತಿಹಾಸದಲ್ಲಿ ಹಿಂದೆ ಎಲ್ಲೂ ಇಲ್ಲದಂತೆ 4 ಸಾವಿರ ವೈದ್ಯರನ್ನು ನೇಮಕ ಮಾಡಲಾಗಿದೆ. ಲಸಿಕೆ ಬಗ್ಗೆ ಅನೇಕರು ಟೀಕೆಗಳನ್ನು ಮಾಡಿದ್ದರು. ಲಸಿಕೆ ಇದೇ ರೀತಿ ನೀಡಿದರೆ 2024ಕ್ಕೆ ಲಸಿಕಾಕರಣ ಮುಗಿಯಲಿದೆ ಎಂದು ಹೇಳಿದ್ದರು. ಆದರೆ ಇಂದು ದೇಶದಲ್ಲಿ 93 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಎಲ್ಲ ಕಡೆ ಅತಿ ಹೆಚ್ಚು ಲಸಿಕೆ ನೀಡಿ, 85% ಜನರಿಗೆ ಲಸಿಕೆ ನೀಡಲಾಗಿದೆ. ಶೇ. 30ರಷ್ಟು ಎರಡೂ ಡೋಸ್ ನೀಡಲಾಗಿದೆ. ಲಸಿಕೆ ಪಡೆದು ಕೋವಿಡ್ ಅನ್ನು ನಾಶ ಮಾಡಬೇಕು ಎಂದರು.
ಚಾಮರಾಜನಗರ ವೈದ್ಯಕೀಯ ಸಂಸ್ಥೆಯಲ್ಲಿ 450 ಹಾಸಿಗೆಗಳ ಹೊಸ ಆರೋಗ್ಯ ಸೌಲಭ್ಯ ನೀಡಲಾಗಿದೆ. ಇದು ದುರ್ಬಲ ವರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ. ಆರೋಗ್ಯ ಕ್ಷೇತ್ರಕ್ಕೆ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶೇಷ ಒತ್ತು ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೂಡ ಈ ಸಂಸ್ಥೆ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ ಎಂದರು.
ದಿ ಇಂಡಿಯಾ ಟುಡೇ ಗ್ರೂಪ್ ನಿಂದ ರಾಜ್ಯಕ್ಕೆ ಅತ್ಯುತ್ತಮ ಕೋವಿಡ್ ನಿರ್ವಹಣೆ ರಾಜ್ಯ ಎಂಬ ಪ್ರಶಸ್ತಿ ದೊರೆತಿದೆ. ಇದರಲ್ಲಿ ಆರೋಗ್ಯ ಸಿಬ್ಬಂದಿ ಮುಂಚೂಣಿ ಕಾರ್ಯಕರ್ತರು, ವಿದ್ಯಾರ್ಥಿಗಳು ಎಲ್ಲ ಕಾರ್ಯ ಅವಿಸ್ಮರಣೀಯವಾಗಿದೆ. ಕೋವಿಡ್ ಒಂದು ಹಾಗೂ ಎರಡನೇ ಅಲೆ ತಡೆಗಟ್ಟಲು ಅನೇಕರು ನೆರವಾಗಿದ್ದಾರೆ. ಈ ಪ್ರತಿಷ್ಠಿತ ಸಂಸ್ಥೆಯಲ್ಲಿ 750 ವೈದ್ಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.