ಕೋರ್ಟ್ ಆವರಣದಲ್ಲಿ ಬಾಂಬ್ ಸ್ಪೋಟ ಪ್ರಕರಣ: ಇಬ್ಬರಿಗೆ 10 ವರ್ಷ, ಒಬ್ಬನಿಗೆ 5 ವರ್ಷ ಜೈಲು ಶಿಕ್ಷೆ

ಮೈಸೂರು: ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಳೆದ 5 ವರ್ಷಗಳ ಹಿಂದೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಅಲ್ ಖೈದಾ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ತಮಿಳುನಾಡಿನ ಬೇಸ್ ಮೂವ್‍ಮೆಂಟ್ ಸಂಘಟನೆಗೆ ಸೇರಿದ ಮೂರು ಮಂದಿಗೆ ಶಿಕ್ಷೆ ಪ್ರಮಾಣವನ್ನು ರಾಷ್ಟ್ರೀಯ ತನಿಖಾ ತಂಡದ (ಎನ್‍ಐಎ) ವಿಶೇಷ ನ್ಯಾಯಾಲಯ ಪ್ರಕಟಿಸಿದೆ.

ನೈನರ್ ಅಬ್ಬಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಬಾಸ್, ಸಂಸುಲ್ ಕರೀಂ ಖಾನ್ ಅಲಿಯಾಸ್ ಕರೀಂ ಅಲಿಯಾಸ್ ಅಬ್ದುಲ್ ಕರೀಂ ಮತ್ತು ದಾವೂದ್ ಸುಲೈಮನ್ ಶಿಕ್ಷೆಗೊಳಗಾದವರು.

ಈ ಮೂವರಲ್ಲಿ ನೈನರ್ ಅಬ್ಬಾಸ್ ಅಲಿಗೆ 10 ವರ್ಷ ಜೈಲು ಮತ್ತು 43 ಸಾವಿರ ರೂ. ದಂಡ, ಸಂಸುಲ್ ಕರೀಂ ಖಾನ್‍ಗೆ 5 ವರ್ಷ ಜೈಲು ಮತ್ತು 25 ಸಾವಿರ ರೂ. ದಂಡ, ದಾವೂದ್ ಸುಲೈಮಾನ್‍ಗೆ 10 ವರ್ಷ ಜೈಲು ಮತ್ತು 38 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.