ಕಾಂಗ್ರೆಸ್ ನಾಯಕರು ಜೆಡಿಎಸ್ ಲೀಡರುಗಳ ಮನೆಗಳ ಮುಂದೆ ಬಲೆ ಹಾಕಿಕೊಂಡು ಕೂತಿದ್ದಾರೆ -ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ದಿವಂಗತ ಎಂಸಿ ಮನಗೂಳಿ ಅವರು ತಮ್ಮ ಮಕ್ಕಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ತಮ್ಮ ಮನೆಗೆ ಬಂದು ಕೇಳಿಕೊಂಡಿದ್ದರು ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ತೀವ್ರ ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮಗಳ ಮುಂದೆ ತಮ್ಮ ಬೇಸರ ಹೊರಹಾಕಿದ ಹೆಚ್ ಡಿಕೆ, ?ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು. ಅವರಿಗೆ ಜನರೇ ಉತ್ತರ ನೀಡುತ್ತಾರೆ. ಮನಗೂಳಿ ಅವರು ಡಿ.ಕೆ.ಶಿವಕುಮಾರ್ ಮನೆಗಷ್ಟೇ ಏಕೆ?, ಅವರ ಹತ್ತಿರಕ್ಕೂ ಹೋಗಿರಲಿಲ್ಲ. ಅವರ ಮಗ ಹೋಗಿ ಭೇಟಿ ಮಾಡಿರಬಹುದು? ಎಂದರು.

ಶಿವಮೊಗ್ಗದ ನಾಯಕರೊಬ್ಬರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ವರ್ಷಾನುಗಟ್ಟಲೆ ಅವರ ಮನೆ ಮುಂದೆ ಬಲೆ ಹಾಕಿಕೊಂಡು ಕೂತಿದ್ದೆ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದರು. ಅವರು ಜೆಡಿಎಸ್ ನಾಯಕರ ಮನೆ ಮುಂದೆ ಈಗಲೂ ಬಲೆ ಹಾಕಿಕೊಂಡು ಕೂತಿದ್ದಾರೆ ಎಂದು ಹೆಚ್‍ಡಿಕೆ ಕಟುವಾಗಿ ಟೀಕಿಸಿದರು.

ಮುಂದೆ ಆ ಬಲೆಯೇ ಕಾಂಗ್ರೆಸ್ ನಾಯಕರಿಗೆ ದೊಡ್ಡ ಮುಳುವಾಗಲಿದೆ. ಎಲ್ಲವನ್ನೂ ಕಾಲವೇ ನಿರ್ಣಯ ಮಾಡಲಿದೆ, ನೋಡೋಣ ಎಂದು ಮಾರ್ಮಿಕವಾಗಿ ಅವರು ಉತ್ತರ ನೀಡಿದರು.

16ರಿಂದ ಉಪ ಚುನಾವಣೆ ಪ್ರಚಾರ
ಹಬ್ಬ ಮುಗಿದ ಮೇಲೆ, ಅಂದರೆ ಅಕ್ಟೋಬರ್ 16ರಿಂದ ನಾನು ಉಪ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಸಿಂಧಗಿ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಹಾನಗಲ್ ಕ್ಷೇತ್ರದಲ್ಲೂ ಜೆಡಿಎಸ್ ಪರ ಅಲೆ ಇದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿದ್ದು, ಗೆಲುವು ಆ ಪಕ್ಷಕ್ಕೆ ಗಗನಕುಸುಮ. ಕಳೆದ 15 ವರ್ಷಗಳಿಂದ ಅಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಫೈಟ್ ಇದೆ. ಇದು ಗೊತ್ತಿದ್ದೇ ಕಾಂಗ್ರೆಸ್‍ನಮ್ಮ ಪಕ್ಷದಿಂದ ಹೈಜಾಕ್ ಮಾಡಿಕೊಂಡು ಹೋದ ಮನಗೂಳಿ ಅವರ ಪುತ್ರನನ್ನು ಅಭ್ಯರ್ಥಿ ಮಾಡಿದೆ. ಇದಕ್ಕಿಂತ ದೊಡ್ಡ ದಾರಿದ್ರ್ಯ ಆ ಪಕ್ಷಕ್ಕೆ ಏನಿದೆ ಎಂದರು ಅವರು.

ಸಿಂಧಗಿಯಲ್ಲಿ ಜೆಡಿಎಸ್ ಪಕ್ಷವು ಸುಸಂಸ್ಕೃತ ಹೆಣ್ಣು ಮಗಳಿಗೆ ಟಿಕೆಟ್‍ನೀಡಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿರುವ ಕುಟುಂಬದ ಹೆಣ್ಣುಮಗಳು ಅವರು. ಜತೆಗೆ, ಎಂ.ಎ ಪಧವೀಧರೆ ಕೂಡ. ಹಾನಗಲ್‍ಕ್ಷೇತ್ರದಲ್ಲಿ ಎಂ.ಟೆಕ್‍ಮಾಡಿರುವ ನಿಯಾಜ್‍ಶೇಖ್‍ಎಂಬ ಯುವಕನಿಗೆ ಟಿಕೆಟ್‍ಕೊಟ್ಟಿದ್ದೇವೆ. ಅಂಥ ಅಭ್ಯರ್ಥಿಗಳನ್ನು ಜನರು ಗೆಲ್ಲಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನನ್ನ ಬಗ್ಗೆ ಕಾಂಗ್ರೆಸ್ ಗೆ ಭಯವಿದೆ
ಕುಮಾರಸ್ವಾಮಿ ಅವರ ಜನರ ಜತೆಗಿನ ಸಂಪರ್ಕ ಕಂಡರೆ ಕಾಂಗ್ರೆಸ್ ಗೆ ಭಯ ಆಗುತ್ತಿದೆ. ನನ್ನ ಬಗ್ಗೆ ಜನರಿಗೆ ಇರುವ ಪ್ರೀತಿ, ವಿಶ್ವಾಸ ಕಂಡು ಕಾಂಗ್ರೆಸ್ಸಿಗರು ಕುಗ್ಗಿಹೋಗಿದ್ದಾರೆ ಎಂದ ಹೆಚ್‍ಡಿಕೆ ಅವರ, ಕಾಂಗ್ರೆಸ್ ನಾಯಕರಿಗೆ ರಾಮನಗರ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಗೊತ್ತಿಲ್ಲ. ಸರಿಯಾದ ದೂರದೃಷ್ಟಿ ಇಲ್ಲ. ರಾಜಕೀಯ ಬಿಟ್ಟರೆ ಅವರಿಗೆ ಬೇರೆ ಚರ್ಚೆಯ ವಿಷಯವೇ ಇಲ್ಲ. ಜನತೆ ಜತೆಗಿನ ನನ್ನ ಸಂಪರ್ಕದಿಂದ ಕಳವಳಗೊಂಡು ನನ್ನನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ನನ್ನ ಹಾಗೂ ನಮ್ಮ ಪಕ್ಷದ ಬಗ್ಗೆ ಹೆಚ್ಚು ಆತಂಕ ಕಾಂಗ್ರೆಸ್ಸಿಗರಿಗೆ ಇದೆ. ಆದ್ದರಿಂದ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜತೆಗೆ ಚನ್ನಪಟ್ಟಣ ಕ್ಷೇತ್ರದ ಸಮಸ್ಯೆಗಳಿಗೆ ಹೆಚ್‍ಡಿಕೆ ಸ್ಪಂದಿಸುತ್ತಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಅವರು ಟೀಕಿಸಿದರು.