ಡಾ ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಇಂದು ವಿಶ್ವ ಆಹಾರ ದಿನ, ಹಸಿವು ಮುಕ್ತ ಸಮಾಜವನ್ನು ಮಾಡಲು ಇಡೀ ಜಗತ್ತಿನಾದ್ಯಂತ ಹಲವಾರು ಸಂಘ ಸಂಸ್ಥೆಗಳು, ಸರ್ಕಾರಗಳು ಶ್ರಮಿಸುತ್ತಲೇ ಇವೆ ಅದರೆ ಇಂದಿಗೂ ಕೋಟ್ಯಾಂತರ ಜನ ಹಸಿವಿನಿಂದ ಬಳಲುವುದನ್ನು ಸಮಾಜ ನಾವುಗಳು ಸಾಕ್ಷಿ ಆಗಿ ನಿಂತಿದ್ದೇವೆ,
ಅನ್ನ ಪರಬ್ರಹ್ಮ ಎಂಬ ನುಡಿಯನ್ನು ಶತಮಾನದಿಂದಲೂ ಪಾಲಿಸಿಕೊಂಡು ಬಂದವರು ನಾವು, ನಾವು ಆಹಾರ ಸೇವಿಸುವ ಸಂದರ್ಭದಲ್ಲಿ ಯಾರದರೂ ಬಂದರೆ ಅವರಿಗೆ ಕೊಟ್ಟು ತಿನ್ನುವ ಪರಂಪರೆಯು ನಮ್ಮದು, ಅಂತಹ ಸಂಸ್ಕೃತಿಯು ನಮ್ಮದು ಆಗಿದ್ದರೂ ಭಾರತದಲ್ಲಿ ಹಸಿವಿನಿಂದ ನರಳುವವರ ಸಂಖ್ಯೆ ಕಡಿಮೆ ಏನಿಲ್ಲ ಇತ್ತೀಚಿಗೆ ಐರ್ಲೆಂಡ್‍ನ ಧನಸಹಾಯ ಹೊಂದಿರುವ ಏಜೆನ್ಸಿ ಕನ್ಸರ್ನ್ ವರ್ಲ್ಡ್‍ವೈಡ್ ಮತ್ತು ಜರ್ಮನಿಯ ಸಂಸ್ಥೆ ವೆಲ್ಟ್ ಹಂಗರ್ ಹೆಲ್ಪ್ ಸಹಯೋಗದಲ್ಲಿ ಜಾಗತಿಕ ಹಸಿವು ಸೂಚ್ಯಂಕ(ಜಿಎಚ್‍ಐ) ರಾಷ್ಟ್ರಗಳಲ್ಲಿನ ಹಸಿವಿನ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತಿದೆ.
ಅಕ್ಟೋಬರ್ 16 ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. 1945ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ವಿಶ್ವದಾದ್ಯಂತ ಹಸಿವಿನ ಮಟ್ಟ ಮತ್ತು ಅಪೌಷ್ಟಿಕತೆ ಲೆಕ್ಕಹಾಕುವ ಸೂಚ್ಯಂಕವು, ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳ ಕುರಿತ ಸೂಚ್ಯಂಕವನ್ನು ಪ್ರತಿ ವರ್ಷವೂ ನೀಡುತ್ತಿದೆ.
ಈ ಬಾರಿಯ ಸೂಚ್ಯಂಕದಲ್ಲಿ ಭಾರತದ ಸ್ಥಾನವು 101ಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಕ್ಕಿಂತಲೂ ಹಿಂದುಳಿದಿದೆ.
ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ 76, ಬಾಂಗ್ಲಾದೇಶ 76, ಮ್ಯಾನ್ಮಾರ್ 71 ಮತ್ತು ಪಾಕಿಸ್ತಾನ 92ನೇ ರ್ಯಾಂಕ್ ಪಡೆದಿವೆ.
ಚೀನಾ, ಬ್ರೆಜಿಲ್ ಮತ್ತು ಕುವೈತ್ ಸೇರಿದಂತೆ 18 ರಾಷ್ಟ್ರಗಳು ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಆದರೆ ಭಾರತ 101ನೇ ರ್ಯಾಂಕ್ ಗೆ ಕುಸಿದಿರುವುದು ಕಳವಳಕಾರಿಯಾಗಿದೆ. ಕಳೆದ ವರ್ಷ 107 ರಾಷ್ಟ್ರಗಳ ಪೈಕಿ 94ನೇ ಸ್ಥಾನದಲ್ಲಿತ್ತು.
ವಿಶ್ವದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಎತ್ತರಕ್ಕೆ ಸಮನಾದ ತೂಕವನ್ನು ಹೊಂದಿರದ ಮಕ್ಕಳು ಭಾರತದಲ್ಲಿದ್ದಾರೆ. 2016-2020ರ ನಡುವೆ ಎತ್ತರಕ್ಕೆ ಸರಿಯಾದ ತೂಕ ಹೊಂದಿರದ ಮಕ್ಕಳ ಪ್ರಮಾಣ ಶೇಕಡಾ 17.3 ಇದೆ. 1998-2002ರ ನಡುವೆ ಈ ಪ್ರಮಾಣ ಶೇಕಡಾ 17.1 ಇತ್ತು ಎಂದು ಜಿಎಚ್‍ಐ ವರದಿ ಹೇಳಿದೆ.
ಕೋವಿಡ್-19 ಸೋಂಕು ಮತ್ತು ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾದ ಲಾಕ್‍ಡೌನ್, ಕರ್ಫ್ಯೂಗಳಂತಹ ಕಠಿಣ ಕ್ರಮಗಳು ಹಸಿವಿನ ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ ಮಾಡಲು ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಸೇವಿಸುವ ಹಕ್ಕು ಇದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಬಡ ರಾಷ್ಟ್ರಗಳಲ್ಲಿ ಶೇ. 50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆಹಾರ ದಿನದಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣ ತೊಡಲಾಗಿದೆ.
ವರ್ಲ್ಡ್ ಬ್ಯಾಂಕ್ ಎಚ್ಚರಿಕೆ ನೀಡುತ್ತಾ- ಬಡತನದ ವಿರುದ್ಧ ಹೋರಾಟದಲ್ಲಿ ಕಷ್ಟಪಟ್ಟು ದುಡಿದ ಆದಾಯವನ್ನು ಭಾರತದ ಜನರು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಅಲ್ಲದೇ ಕೋವಿಡ್-19 ನಿಂದ ಉಂಟಾದ ಉದ್ಯೋಗ ನಷ್ಟ ಹಾಗೂ ಆದಾಯ ನಷ್ಟವು ಹಲವಾರು ಕುಟುಂಬಗಳನ್ನು ಬಡತನಕ್ಕೆ ದೂಡಿದೆ ಎಂದು ಅದು ತಿಳಿಸಿದೆ.
ಆರ್ಥಿಕ ಉತ್ತೇಜನಕ್ಕೆಂದು ತಂದಿರುವ 20 ಲಕ್ಷ ಕೋಟಿ ಪ್ಯಾಕೇಜಿನಲ್ಲಿ ಕೇಂದ್ರ ಸರ್ಕಾರದ ಖರ್ಚುಗಳನ್ನಷ್ಟೇ ಉಲ್ಲೇಖಿಸಲಾಗಿದೆ. ಜನರಿಗೆ ನೀಡುವ ಪ್ರಯೋಜನಗಳ ಕುರಿತು ಏನೂ ಉಲ್ಲೇಖಿಸಿಲ್ಲ ಎಂದು ಕಳೆದ ಜೂನ್ ನಲ್ಲಿ ನೀಡಿರುವ ಇಂಡಿಯ ಡೆವಲಪ್‍ಮೆಂಟ್ ಅಪ್ಡೇಟ್ ವರದಿಯಲ್ಲಿ ವರ್ಲ್ಡ್ ಬ್ಯಾಂಕ್ ತಿಳಿಸಿದೆ.
ನಿತ್ಯ ಕೋಟ್ಯಂತರ ಭಾರತೀಯರು ಹಸಿದ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಶ್ರೀಲಂಕಾ, ಮ್ಯಾನ್ಮಾರ್‍ಗಳಿಗಿಂತಲೂ ನಾವು ಹೀನ ಸ್ಥಿತಿಯಲ್ಲಿದ್ದೇವೆ. ವಿಶ್ವದ ಮೂರನೇ ಆರ್ಥಿಕ ಶಕ್ತಿ ಎಂದು ಬೀಗುವ, ಅಭಿವೃದ್ಧಿ ಎನ್ನುವ ಮಂತ್ರ ಪಠಣವನ್ನು?ಹಸಿವಿನ ಸೂಚ್ಯಂಕ? ಅಣಕಿಸುವಂತಿದೆ.
ಭಾರತ ಜನರು ಬಡತನದ ವಿರುದ್ಧದ ಹೋರಾಟದಲ್ಲಿ ತಾವು ಕಷ್ಟಪಟ್ಟು ಗಳಿಸಿದ ಲಾಭಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಆರ್ಥಿಕ ಅಸಮಾನತೆಗಳು ಇನ್ನೂ ವಿಸ್ತಾರಗೊಳ್ಳುತ್ತವೆ ಎಂದು ವರ್ಲ್ಡ್ ಬ್ಯಾಂಕ್ ಹೇಳಿದೆ. ಭಾರತದ ಅರ್ಧ ಜನಸಂಖ್ಯೆಯ ಬಳಕೆಯ ಮಟ್ಟಗಳು ಬಡತನದ ರೇಖೆಗೆ ನಿಖರವಾಗಿ ಹತ್ತಿರದಲ್ಲಿದೆ ಎಂದು ಅದು ತಿಳಿಸಿದೆ.
ಕೋವಿಡ್‍ನಿಂದಾದ ಆರ್ಥಿಕ ಕುಸಿತ, ಉದ್ಯೋಗ ನಷ್ಟದಿಂದಾಗಿ ಕುಟುಂಬಗಳು ಬಡತನಕ್ಕೆ ಇಳಿಯುವ ಸಾಧ್ಯತೆ ಇದೆ. 90% ಭಾರತೀಯ ಉದ್ಯೋಗಿಗಳು ಅಸಂಘಟಿತ ವಲಯದಲ್ಲಿದ್ದಾರೆ ಎಂದೂ ಕರಡು ಉಲ್ಲೇಖಿಸಿದೆ. ಕುಗ್ಗುತ್ತಿರುವ ಆರ್ಥಿಕ ಚಟುವಟಿಕೆಗಳು, ಸರ್ಕಾರ ಹೇರಿದ ಲಾಕ್‍ಡೌನ್ ಮತ್ತು ಸಾಮಾಜಿಕ ಅಂತರದ ಶಿಷ್ಟಾಚಾರದಿಂದ ಉಂಟಾಗುವ ವೇತನ ಮತ್ತು ಜೀವನೋಪಾಯದ ನಷ್ಟದಿಂದಾಗಿ ಈ ಅಸಂಘಟಿತ ಕಾರ್ಮಿಕರು ಬಡತನಕ್ಕೆ ಸಿಲುಕುವ ಅಪಾಯವಿದೆ. ಭಾರತದಲ್ಲಿ ಸ್ಥಿರವಾದ ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಯಿಂದಾಗಿ ವಲಸಿಗರು ಆಗಾಧವಾದ ಅಪಾಯಗಳನ್ನು ಎದುರಿಸುತ್ತಾರೆ. ಅಂತರರಾಜ್ಯ ವಲಸಿಗರು ಬಡತನ ಮತ್ತು ನಿರ್ಗತಿಕತೆಯ ಅಪಾಯದಲ್ಲಿದ್ದಾರೆ.
ಪ್ರತಿ ಏಳು ಮಂದಿ ಭಾರತೀಯರಲ್ಲಿ ಒಬ್ಬ ಹಸಿವಿನಿಂದ ಬಳಲುತ್ತಿದ್ದು, 2030ರ ವೇಳೆಗೆ ದೇಶದಲ್ಲಿನ ಹಸಿವಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ಶಿಶುಮರಣ ಸಂಖ್ಯೆ, ಅಪೌಷ್ಟಿಕತೆ, ಕಡಿಮೆ ತೂಕ ಹಾಗೂ ಬೆಳವಣಿಗೆ ಕುಂಠಿತ ಮಕ್ಕಳನ್ನು ಹಸಿವಿನ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಪರಿಗಣಿಸಲಾಗಿದೆ. 18 ಕೋಟಿಗೂ ಹೆಚ್ಚು ಭಾರತೀಯರು ಹಸಿವಿನ ದವಡೆಗೆ ಸಿಲುಕಿದ್ದರೆ, ನೂರರಲ್ಲಿ ಹದಿನೈದು ಮಂದಿ ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ.
ಜನಸಂಖ್ಯಾ ಸ್ಫೋಟ ಈಗಿರುವಂತೆಯೇ ಮುಂದುವರಿದಲ್ಲಿ ಅನ್ನದ ಸಮಸ್ಯೆ ಮತ್ತಷ್ಟು ವಿಷಮಿಸಲಿದೆ ಎಂದು ವರದಿ ಎಚ್ಚರಿಸಿದೆ. ಹಸಿವಿನ ಸಮಸ್ಯೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಆಹಾರದ ಕೊರತೆ ಇದೆ ಎಂದು ಭಾವಿಸಬೇಕಿಲ್ಲ. ಎಲ್ಲ ಭಾರತೀಯರಿಗೂ ಸಾಕಾಗುವಷ್ಟು ಆಹಾರಧಾನ್ಯಗಳನ್ನು ನಮ್ಮಲ್ಲಿ ಬೆಳೆಯಲಾಗುತ್ತಿದೆ. ಸಮಸ್ಯೆ ಇರುವುದು ಅವುಗಳನ್ನು ತಲುಪಿಸುವ ವ್ಯವಸ್ಥೆಯಲ್ಲಿ. ಜನರ ಅನ್ನ ಹಸಿವಿನಲ್ಲೂ ಲಾಭ ಮಾಡಿಕೊಳ್ಳುವ ಭ್ರಷ್ಟರಿಂದಾಗಿ ಈ ಅವ್ಯವಸ್ಥೆ ತಲೆದೋರಿದೆ. ಎಲ್ಲ ನಾಗರಿಕರಿಗೂ ಕನಿಷ್ಠ ಆಹಾರ ಹಾಗೂ ಪೌಷ್ಟಿಕಾಂಶಗಳನ್ನು ಒದಗಿಸುವ ಉದ್ದೇಶದಿಂದ 2013ರಲ್ಲಿ ಅನುಷ್ಠಾನಗೊಂಡ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯ ಮೂಲ ಆಶಯವೇ ವಿಫಲವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳ ನಡುವಣ ಹೊಂದಾಣಿಕೆಯ ಕೊರತೆ ಫಲಾನುಭವಿಗಳಿಗೆ ದವಸ ಧಾನ್ಯಗಳು ಸರಿಯಾಗಿ ತಲುಪಲು ಅಡ್ಡಿಯಾಗಿದೆ. ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಗಳು ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿವೆ. ಆದರೆ, ಎಷ್ಟೋ ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗಿ ಬಯಲಿನಲ್ಲೇ ಉಳಿದಿರುವಾಗ, ಅವರಿಗೆ ಈ ಯೋಜನೆಗಳು ತಲುಪುವುದಾದರೂ ಹೇಗೆ? ಮಕ್ಕಳ ಅಪೌಷ್ಟಿಕತೆ ಹಾಗೂ ಕುಂಠಿತ ಬೆಳವಣಿಗೆ ರೀತಿಯ ಸಮಸ್ಯೆಗಳಿಗೂ ಶಿಕ್ಷಣ ಕ್ಷೇತ್ರದ ವೈಫಲ್ಯ, ನೈರ್ಮಲ್ಯದ ಕೊರತೆ ಹಾಗೂ ಮಾಲಿನ್ಯ ಹೆಚ್ಚಳದಂತಹ ಸಂಗತಿಗಳಿಗೂ ಸೂಕ್ಷ್ಮ ಸಂಬಂಧ ಇರುವುದನ್ನು ಗಮನಿಸಬೇಕು. ಕರ್ನಾಟಕದಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆಹಾರಧಾನ್ಯ ನೀಡುವ ಅನ್ನಭಾಗ್ಯ ಯೋಜನೆ ಜಾರಿಯಲ್ಲಿದೆ. ಆದರೆ, ಈ ಯೋಜನೆಗಳೆಲ್ಲ ಪರಿಣಾಮಕಾರಿಯಾಗಿ ಜಾರಿಯಾಗದೆ ಹಸಿವಿನ ಸಮಸ್ಯೆ ಉಲ್ಬಣಿಸುತ್ತಲೇ ಇದೆ.
ವಿಶ್ವದ ಮೂರನೇ ಆರ್ಥಿಕ ಶಕ್ತಿ ಎಂದು ಬೀಗುವ ಭಾರತದಲ್ಲಿ ಬಡವರು ಹೇಗೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನುವುದಕ್ಕೆ ಹಸಿವಿನ ಸೂಚ್ಯಂಕ ಒಂದು ಉದಾಹರಣೆ. ಭ್ರಷ್ಟಾಚಾರ ಹಾಗೂ ಯೋಜನೆಗಳ ನಿರ್ವಹಣೆಯ ಅಸಮರ್ಪಕತೆ ಆಹಾರ ಪೂರೈಕೆ ವ್ಯವಸ್ಥೆ ಹಳಿತಪ್ಪಲು ಪ್ರಮುಖ ಕಾರಣಗಳು. ಅನ್ನಭಾಗ್ಯದಂತಹ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿಸುತ್ತವೆ ಎನ್ನುವ ಟೀಕೆಗಳನ್ನು ಗಮನಿಸಿದರೆ, ನಮ್ಮ ನಡುವೆಯೇ ಇರುವ ಜನರ ಬಡತನದ ಬಿಸಿ ಸಮಾಜದ ಮುಖ್ಯವಾಹಿನಿಗೆ ತಾಕುತ್ತಿಲ್ಲ ಎನ್ನುವುದು ಆತಂಕ ಹುಟ್ಟಿಸುವಂತಿದೆ. ಅಭಿವೃದ್ಧಿಯ ನಿಜವಾದ ಸೂಚ್ಯಂಕಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ಪ್ರತಿಫಲಿಸಬೇಕೆ ಹೊರತು ಪೇಟೆಯ ಅಂಕಿಅಂಶಗಳಲ್ಲ.
ಒಂದೆಡೆ ಆಹಾರೋದ್ಯಮ ಬೆಳೆಯುತ್ತಿದ್ದರೆ ಇನ್ನೊಂದೆಡೆ ಜನರು ಹಸಿವಿನಿಂದ ಸಾಯುತ್ತಿರುವ ಘಟನೆಗಳೂ ಹೆಚ್ಚುತ್ತಿದೆ. ಇದರ ಜೊತೆಗೆ ಆಹಾರವನ್ನು ರಕ್ಷಣೆ ಮಾಡುವ ಒಂದು ವ್ಯವಸ್ಥೆ ನಮ್ಮಲ್ಲಿ ಸಾಕಷ್ಟಿಲ್ಲ. ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಕೂಡ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿರುವ ಸರ್ಕಾರ, ದೇಶದ ಎಲ್ಲ ನಾಗರಿಕರಿಗೂ ಆಹಾರ ತಲುಪಿಸುವುದನ್ನು ಆದ್ಯತೆಯ ಸಂಗತಿಯಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ಪ್ರಕಟಿಸಿದರಷ್ಟೇ ಸಾಲದು, ಆ ಸವಲತ್ತುಗಳು ಜನರಿಗೆ ತಲುಪುವ ನಿಟ್ಟಿನಲ್ಲಿ ಪ್ರಾಮಾಣಿಕ, ಪರದರ್ಶಕ ಪ್ರಯತ್ನಗಳೂ ಬೇಕಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನ್ನ ಸಿಗುವಂತೆ ಆಗಲಿ, ಈ ಜಗತ್ತು ಹಸಿವು ಮುಕ್ತ ವಾಗಲಿ ಎಂಬುದಷ್ಟೇ ಲೇಖನದ ಆಶಯ.