2 ವರ್ಷದಿಂದ ಜನರಿಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ಜನರೇ ಟೋಪಿ ಹಾಕಬೇಕು -ಡಿಕೆಶಿ

ಹಾನಗಲ್: ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಹಾನಗಲ್ ನ ಕೊಪ್ಪರಸಿಕೊಪ್ಪ, ಬೆಳಗಾಲಪೇಟದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಚಾರ ಭಾಷಣದ ಮುಖ್ಯಾಂಶಗಳು:

ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು. ಎರಡು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಆದರೆ ಅವರು ಹೇಳಿದ್ದಂತೆ ಅಚ್ಚೇ ದಿನ ಬರಲೇ ಇಲ್ಲ.

ಈ ಗ್ರಾಮದವರು ಇಲ್ಲಿ ಹೂ ಬೆಳೆದು ಅದನ್ನು ಗೋವಾಗೆ ಮಾರುತ್ತಿದ್ದರು. ಆದರೆ ಇಂದು ನೀವು ಬೆಳೆದ ಹೂವು ಬೇಡ ಎಂದು ತಿರಸ್ಕರಿಸುತ್ತಿದ್ದಾರೆ. ಈ ವಿಚಾರವಾಗಿ ನನಗೆ ಮನವಿ ಪತ್ರವನ್ನು ಗ್ರಾಮಸ್ಥರೇ ನೀಡಿದ್ದಾರೆ. ಮುಖ್ಯಮಂತ್ರಿಗಳೇ ಇದು ನಿಮ್ಮ ತವರು ಜಿಲ್ಲೆ. ಈ ರಾಜ್ಯದ ರೈತನ ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಿಮ್ಮದು. ಈ ರೈತರ ಕಷ್ಟ ನಿಮ್ಮ ಕಣ್ಣಿಗೆ ಕಾಣುತ್ತಿದೆಯೋ, ಇಲ್ಲವೋ? ನಿಮಗೆ ಕಣ್ಣು, ಕಿವಿ, ಹೃದಯ ಇದೆಯೋ, ಇಲ್ಲವೋ?

ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ಪೆÇಲೀಸರು ಖಾಕಿ ಬಟ್ಟೆ ತೆಗೆದುಹಾಕಿ ಕೇಸರಿ ಬಟ್ಟೆ ಧರಿಸಿದ್ದಾರೆ. ಸಂವಿಧಾನ ನಿಮಗೆ ಖಾಕಿ ಬಟ್ಟೆ, ಅಧಿಕಾರ ಕೊಟ್ಟಿದೆ. ಅದನ್ನು ಹಾಕಿಕೊಂಡು ರಾಷ್ಟ್ರಧ್ವಜಕ್ಕೆ ಸೇವೆ ಮಾಡಿ. ನಿಮ್ಮ ನಿಷ್ಠೆ ಹಾಗೂ ಸೆಲ್ಯೂಟ್ ರಾಷ್ಟ್ರಕ್ಕೆ ಇರಬೇಕೇ ಹೊರತು ಸಂಘ-ಪರಿವಾರಕ್ಕೆ ಅಲ್ಲ. ಚುನಾವಣೆ ಮುಗಿಯಲಿ, ಪೆÇಲೀಸ್ ಠಾಣೆ ಮುಂದೆ ಹೋಗಿ ಧರಣಿ ಮಾಡುತ್ತೇವೆ.

ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ದೇವನೊಬ್ಬ ನಾಮ ಹಲವು. ಇದು ಕಾಂಗ್ರೆಸ್ ಪಕ್ಷದ ಸಿದ್ದಾಂತ. ಆದರೆ ಪೆÇಲೀಸ್, ಸರ್ಕಾರ ಏನು ಮಾಡುತ್ತಿದೆ? ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಮುಖ್ಯಮಂತ್ರಿಗಳು ಇದನ್ನು ಬೆಂಬಲಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಶಾಂತಿ ಕದಡುವುದಕ್ಕೆ ನೀವು ಬೆಂಬಲವಾಗಿ ನಿಂತು, ಇತಿಹಾಸದಲ್ಲಿ ಕೆಟ್ಟ ಉದಾಹರಣೆಯಾಗುತ್ತಿದ್ದೀರಿ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕೆಟ್ಟ ಸಂಪ್ರದಾಯಕ್ಕೆ ನೀವು ಸಾಕ್ಷಿಯಾಗುತ್ತಿದ್ದು ಇದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಧರ್ಮಗಳನ್ನು ರಕ್ಷಣೆ ಮಾಡುವ ಕರ್ತವ್ಯ ನಮ್ಮದಾಗಿದೆ.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ವರದಿ ಹೋಗಿದ್ದೆ ತಡ ಎಲ್ಲ ಮಂತ್ರಿಗಳನ್ನು ಈ ಕ್ಷೇತ್ರಗಳಿಗೆ ದುಡ್ಡು ಕೊಟ್ಟು ಕಳಿಸಿ, ಹಂಚಲು ಹೇಳಿದ್ದಾರೆ. ಪ್ರತಿ ಮತಕ್ಕೆ 2 ಸಾವಿರ ರು. ಹಂಚುತ್ತಿದ್ದಾರೆ. ಅವರು ನಿಮಗೂ ನೀಡುತ್ತಾರೆ. ಅವರ ನೋಟು ತೆಗೆದುಕೊಳ್ಳಿ. ಅದು ನಿಮ್ಮ ಹಣ. ಆ ನೋಟು ತೆಗೆದುಕೊಂಡು ನೀವು ಕಾಂಗ್ರೆಸ್ ಗೆ ಮತ ಹಾಕಬೇಕು.

ಈ ದೇಶಕ್ಕೆ ಬುದ್ದಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಪ್ರಜ್ಞಾವಂತರು ಇರಬೇಕು. ಹೀಗಾಗಿ ಹಾನಗಲ್ ನ ಪ್ರಜ್ಞಾವಂತ ಮತದಾರ ತಮ್ಮ ಮತವನ್ನು ಕಾಂಗ್ರೆಸ್ ಹಾಕಬೇಕು. ನಿಮ್ಮ ಸೇವೆ ಮಾಡಲು ನಮಗೆ ಒಂದು ಅವಕಾಶ ಮಾಡಿಕೊಡಿ.