ವಿಜಯಪುರ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಸಿಂಧಗಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಯಡಿಯೂರಪ್ಪನವರು ಅಲ್ಪಸಂಖ್ಯಾತರರನ್ನು ಮತಕ್ಕಾಗಿ ಓಲೈಸುವ ಕೆಲಸ ಮಾಡುತ್ತಿದ್ದಾರಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
ಒಂದೆಡೆ ಮುಸ್ಲೀಮರನ್ನು ದೇಶದಿಂದಲೇ ಓಡಿಸಬೇಕು ಎಂದು ಎನ್ನುವ ಬಿಜೆಪಿ, ಇನ್ನೊಂದೆಡೆ ಅವರಿಗೆ ನಾವೂ ಸಹಾಯ ಮಾಡಿದ್ದೇವೆ. ನಮಗೆ ವೋಟು ಕೊಡಬೇಕು ಎಂದು ಕೇಳುತ್ತಿದೆ. ದ್ವಿಮುಖ ನೀತಿ ಎಂದರೆ ಇದುವೇ ಎಂದು ಅವರು ಕಿಡಿಕಾರಿದರು.
ಮುಸ್ಲೀಮರು ನಮ್ಮ ಪರ ಇರಬೇಕು ಎನ್ನುವ ಬಿಜೆಪಿ, ಅವರನ್ನು ಸಮಾನವಾಗಿ ನೋಡಬೇಕಲ್ಲವೇ? ಹಾಗೆ ಮಾಡದೇ ಮತ ಮಾತ್ರ ಹಾಕಬೇಕು ಎಂದು ಕೇಳಿದರೆ ಹೇಗೆ? ಎಂದು ಹೆಚ್‍ಡಿಕೆ ಖಾರವಾಗಿ ಪ್ರಶ್ನಿಸಿದರು.
ಬಿಜೆಪಿಯು ಉಪ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ ಮತಯಾಚನೆ ಮಾಡುತ್ತಿದೆಯಲ್ಲ ಎನ್ನುವ ಮತ್ತೊಂದು ಪ್ರಶ್ನೆಗೆ ಕುಮಾರಸ್ವಾಮಿ ಅವರು ಉತ್ತರಿಸಿದ್ದು ಹೀಗೆ;
ಬಿಜೆಪಿಯವರು ಮಾತ್ರ ಹಿಂದುಗಳಾ? ನಾವೇನು ಹೊರಗಿನಿಂದ ಬಂದಿದ್ದೇವೆಯಾ? ನಮಗೂ ಹಿಂದುತ್ವವಿದೆ, ನಂಬಿಕೆ-ಶ್ರದ್ಧೆಗಳಿವೆ. ಆದರೆ ನಾವು ಎಲ್ಲರನ್ನೂ ಒಳಗೊಂಡು ರಾಜಕೀಯ ಮಾಡಿದರೆ, ಬಿಜೆಪಿಯವರು ಕೇವಲ ಹಿಂದುತ್ವದ ಆಧಾರದ ಮೇಲೆ ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಹೊರಗೆ ನಾವೆಲ್ಲ ಒಂದು, ನಾವೆಲ್ಲ ಹಿಂದು ಎಂದು ಹೇಳುತ್ತಲೇ ಒಳಗೆ ಮಾತ್ರ ಗರ್ಭಗುಡಿ ಸಂಸ್ಕೃತಿಯನ್ನು ಜೀವಂತ ಇಟ್ಟುಕೊಂಡಿದೆ ಬಿಜೆಪಿ. ಕೆಲವನ್ನು ಬಿಟ್ಟರೆ ದೀನ ದಲಿತರು, ಶೋಷಿತರಿಗೆ ಅಲ್ಲಿಗೆ ಪ್ರವೇಶಾ ಇದೆಯಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಉತ್ತರ ಕೊಟ್ಟಿಲ್ಲ
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಅಲ್ಪಸಂಖ್ಯಾತರ ವಿಷಯದ ಬಗ್ಗೆ ನಾನು ಕೇಳಿದ ಐದು ಪ್ರಶ್ನೆಗಳಿಗೆ ಇನ್ನೂ ಸಿದ್ದರಾಮಯ್ಯ ಅವರಾಗಲಿ ಅಥವಾ ಕಾಂಗ್ರೆಸ್ ಆಗಲಿ ಉತ್ತರ ನೀಡಿಲ್ಲ. ಅದರ ಹೊರತಾಗಿ ಅನಗತ್ಯ ವಿಷಯಗಳ ಬಗ್ಗೆ ಆ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆಂದು ಕುಮಾರಸ್ವಾಮಿ ಅವರು ಹೇಳಿದರು.