ಚಾಮರಾಜನಗರ: ಮರಳು ತುಂಬಿದ್ದ ಟಿಪ್ಪರ್ ಗೆ ಹಿಂಬದಿಯಿಂದ ಪ್ರವಾಸಿಗರ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಗುರುವಾರ ಸಂಭವಿಸಿದೆ.
ಕೇರಳ ಮೂಲದ ಸುಜಿತ್ ಕೃಷ್ಣನ್ (30) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ವಿಜೇಶ್, ಜೀತು, ಸುಲೇಮಾನ್ ಹಾಗೂ ಜೋವನ್ ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.
ಇವರೆಲ್ಲರೂ ಕೇರಳದಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಟೀ ಕುಡಿದು ಬಂದ ಟಿಪ್ಪರ್ ಚಾಲಕ ಏಕಾಏಕಿ ಬಲಗಡೆಗೆ ವಾಹನವನ್ನು ತಿರುಗಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆ ನಂತರ ಟಿಪ್ಪರ್ ಜೊತೆ ಚಾಲಕ ಪರಾರಿಯಾಗಿದ್ದಾನೆ.
ಬೇಗೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.